ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನ ಸರೋವರದಲ್ಲಿ ಭಾನುವಾರ ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮಲ್ಲಿ ಡಾ. ರವಿ ಬಿ. ಮತ್ತು ಡಾ. ಮಲ್ಲಯ್ಯ ಸಂಡೂರು ಸಂಪಾದಿಸಿರುವ ಕರುಣಾಳು ಬೆಳಕು ಡಾ. ಬಿ. ಅಂಬಣ್ಣ ೮೮ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.ಸಂಸದ ಈ. ತುಕಾರಾಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಗ್ರಂಥವನ್ನು ಲೋಕಾರ್ಪಣೆ ಮಾಡಿ, ಡಾ. ಬಿ. ಅಂಬಣ್ಣನವರ ಸಮಾಜ ಸೇವೆ ಸ್ಮರಿಸಿದರಲ್ಲದೆ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ಮೆಲುಕು ಹಾಕಿದರು.
ಕೃತಿ ಪರಿಚಯ ಮಾಡಿಕೊಟ್ಟ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ, ವೈದ್ಯೋ ನಾರಾಯಣ ಹರಿ ಎನ್ನುವಂತೆ ವೈದ್ಯ ಅಂಬಣ್ಣನವರು ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ. ಸಮಾಜ ಸೇವೆಯಲ್ಲೂ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.ಹಗರಿಬೊಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ, ರಂಗಕರ್ಮಿ ಹಾಗೂ ನಿವೃತ್ತ ಕನ್ನಡ ಶಿಕ್ಷಕ ಮ.ಬ. ಸೋಮಣ್ಣ, ಡಾ. ಮಲ್ಲಯ್ಯ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ. ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಬಿ. ನಾಗನಗೌಡ ಅವರು ಡಾ. ಬಿ. ಅಂಬಣ್ಣನವರ ವೈದ್ಯಕೀಯ, ಕಲಾ ಹಾಗೂ ಸಮಾಜ ಸೇವಾ ಕಾರ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಬಿ. ಅಂಬಣ್ಣನವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಬಿ. ಅಂಬಣ್ಣನವರು ಮಾತನಾಡಿದರು.ಡಾ. ಮಲ್ಲಯ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಅಕ್ಷತಾ ಹಾಗೂ ಅಂಬಾದೇವಿ ಅವರು ಪ್ರಾರ್ಥಿಸಿದರು. ಶಿವರಾಮಪ್ಪ ರಾಗಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಅನ್ನಪೂಣ್ಣ ತುಕಾರಾಂ, ರಂಗಭೂಮಿ ಕಲಾವಿದೆ ನಾಡೋಜ ನಾಗರತ್ನಮ್ಮ, ಶಿಕ್ಷಕರಾದ ಎಚ್.ಎನ್. ಭೋಸ್ಲೆ, ನೀಲಾಂಬಿಕ, ಕಲ್ಪನಾ, ದೇವರಮನೆ ನಾಗಪ್ಪ, ಮುಖಂಡರಾದ ಬಸವರಾಜ ಮಸೂತಿ, ಜಿ. ವೀರೇಶ್, ಎ.ಎಂ. ಶಿವಮೂರ್ತಿ, ಎಂ. ಚಂದ್ರಶೇಖರಪ್ಪ, ಕಾರ್ತಿಕ್ ಕಾಳೆ ಮುಂತಾದವರು ಉಪಸ್ಥಿತರಿದ್ದರು.
೯ಎಸ್.ಎನ್.ಡಿ.೦೧ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಈ. ತುಕಾರಾಂ ಅವರು ಕರುಣಾಳು ಬೆಳಕು ಡಾ. ಬಿ. ಅಂಬಣ್ಣ-೮೮ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.