ಹಾವೇರಿಯ ನಾಗೇಂದ್ರನಮಟ್ಟಿ ಎಂಟನೇ ಕ್ರಾಸ್‌ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಹಾವೇರಿ: ಸ್ಥಳೀಯ ನಾಗೇಂದ್ರನಮಟ್ಟಿ ಎಂಟನೇ ಕ್ರಾಸ್‌ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.ಬೆಳಗಿನ ಜಾವ 5ಗಂಟೆಯ ಸುಮಾರಿಗೆ ವಿವಿಧ 16 ದ್ರವ್ಯಗಳಿಂದ ಮಹಾಭಿಷೇಕ, ಷೋಡೋಪಚಾರ ನಡೆಯಿತು. ಅಲಂಕಾರಪ್ರೀಯ ವೆಂಕಟೇಶ್ವರನಿಗೆ ಪಾರಿಜಾತ, ಕಮಲ ಹೂವು, ಕನಕಾಂಬರ, ಮಲ್ಲಿಗೆ ಸೇರಿದಂತೆ ತರಾವರಿ ಹೂವುಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಯಿತು. ಏಕಾದಶಿ ಅಂಗವಾಗಿ ದೇವಸ್ಥಾನದ ತುಂಬೆಲ್ಲಾ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಗ್ಗೆ 8ಕ್ಕೆ ಗರ್ಭಗುಡಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ತುಳಸಿ ಅರ್ಚನೆ ಮತ್ತು ಪಲ್ಲಕ್ಕಿಯೊಂದಿಗೆ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಸಲಾಯಿತು. ಬಳಿಕ ಪಂಚೋಪಚಾರ ಪೂಜೆ, ಧೂಪ, ದೀಪ ನೈವೇದ್ಯ ಸಮರ್ಪಿಸಲಾಯಿತು.ಬೆಳಗ್ಗೆ 9ಕ್ಕೆ ವೈಕುಂಠ ಮಹಾದ್ವಾರದಲ್ಲಿ ಶ್ರೀದೇವಿ, ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿಯ ಚರಪ್ರತಿಷ್ಠಾಪನೆ ಮಾಡಲಾಯಿತು. ನಂತರ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ವೆಂಕಟೇಶ್ವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ವೈಕುಂಠ ಏಕಾದಶಿ ಮಂಗಳವಾರ ದಿವಸ ಬಂದಿರುವುದರಿಂದ ವಿಶೇಷವಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಸಂಖ್ಯೆಯ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹಾವೇರಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದುಕೊಂಡು ಪುನೀತರಾದರು. ಇನ್ನು ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಲಡ್ಡು ಪ್ರಸಾದ, ಪಂಚಾಮೃತವನ್ನು ವಿತರಣೆ ಮಾಡಲಾಯಿತು.ಈ ವೇಳೆ ಕೊಂಚೂರು ಸವಿತಾಪೀಠದ ಸವಿತಾನಂದ ಶ್ರೀಗಳು ಪಾಲ್ಗೊಂಡಿದ್ದರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಗುರುರಾಜ ಕೆ., ಉಪಾಧ್ಯಕ್ಷ ಯಲ್ಲಪ್ಪ ಸೂಗೂರು, ನಗರದ ಅಧ್ಯಕ್ಷ ಪ್ರಸಾದ ಕತ್ತೆಪಲ್ಯಂ, ಈರಣ್ಣ ಆತ್ಮಕೂರ, ಬಾಲರಾಜ ಕತ್ತೆಪಲ್ಯಂ, ಕೃಷ್ಣ ವೆಲ್ಕೂರು, ಜಯರಾಜ ರಾಯಚೂರ, ಗೋವಿಂದ ಆರೆಪಲ್ಯೆಂ, ನಾಗರಾಜ ಧನವಾಡ, ರಘು ಯದುಲ್ಲಾ, ಮಧುಸೂದನ ಆತ್ಮಕೂರ, ಸುರೇಶ ನೆಲ್ಲಿಕೊಂಡಿ, ಗೋಪಿ ಆತ್ಮಕೂರ ಸೇರಿದಂತೆ ಶ್ರೀ ವೆಂಕಟೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಅರ್ಚಕರು ಹಾಗೂ ಸವಿತಾ ಸಮಾಜ ಬಾಂಧವರು ಇದ್ದರು.