ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನಾದ್ಯಂತ ಶುಕ್ರವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಅಡಿಬೈಲು ರಂಗನ ಬೆಟ್ಟದ ಲಕ್ಷ್ಮೀ ರಂಗನಾಥ ಸ್ವಾಮಿ, ಕುಂದೂರಿನ ಲಕ್ಷ್ಮೀನಾರಾಯಣ ಸ್ವಾಮಿ ಗಂಗರದ ಲಕ್ಷ್ಮೀನಾರಾಯಣ ಸ್ವಾಮಿ, ಕರಿಗೌಡನಹಳ್ಳಿಯ ಲಕ್ಷ್ಮೀ ಶ್ರೀನಿವಾಸ ಸ್ವಾಮಿ, ಹಳೆಪಾಳ್ಯದ ಲಕ್ಷ್ಮಿ ಜನಾರ್ಧನ ಸ್ವಾಮಿ, ಬೆಟ್ಟದಳ್ಳಿಯ ಗುಹೇಗುಡ್ಡದ ಉದ್ಧಾರ ರಂಗನಾಥಸ್ವಾಮಿ, ಮರಸು ತಿರುಮಲ ರಂಗನಾಥ ಸ್ವಾಮಿ, ಹಳೆ ಆಲೂರು ತಿರುಮಲ ರಂಗನಾಥ ಸ್ವಾಮಿ ದೇವಾಲಯಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ದೇವಾಲಯಗಳನ್ನು ದೇವರ ವಿಗ್ರಹಗಳನ್ನು ವಿಶೇಷವಾಗಿ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತರು ಮುಂಜಾನೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಏಕಾದಶಿ ಪ್ರಯುಕ್ತ ಭಕ್ತರು ಉಪವಾಸ ವ್ರತವನ್ನು ಆಚರಿಸಿದರು.ದೇವಾಲಯದ ಆವರಣದಲ್ಲಿ ಏಕಾದಶಿಯ ಅಂಗವಾಗಿ ನಿರ್ಮಿಸಲಾಗಿದ್ದ ವೈಕುಂಠ ದ್ವಾರಕ್ಕೆ ಅರ್ಚಕರ ತಂಡವು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಕೊರೆಯುವ ಚಳಿಯಲ್ಲಿಯೇ ಗೋವಿಂದ ನಾಮಸ್ಮರಣೆ ಮಾಡುತ್ತ ವೈಕುಂಠ ದ್ವಾರ ಪ್ರವೇಶ ಮಾಡಿದರು. ಈ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು, ವೈಕುಂಠ ದ್ವಾರ ಪ್ರವೇಶ ಮಾಡಿ, ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.