ಸಾರಾಂಶ
ಮಹೇಂದ್ರ ದೇವನೂರು
ಮೈಸೂರು : ವಿಜಯ ದಶಮಿ ಅಂಗವಾಗಿ ನಗರದ ಅರಮನೆ ಆವರಣದಲ್ಲಿ ವಜ್ರಮುಷ್ಟಿ ಕಾಳಗ ನಡೆಯಿತು.
ಅರಮನೆಯ ಆನೆ ತೊಟ್ಟಿಯಲ್ಲಿ ನಡೆದ ವಜ್ರಮುಷ್ಟಿ ಕಾಳಗದಲ್ಲಿ ಚಾಮರಾಜನಗರದ ಶ್ರೀನಿವಾಸ ಜೆಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜೆಟ್ಟಿ ಹಾಗೂ ಮೈಸೂರಿನ ಬಲರಾಮ್ ಜೆಟ್ಟಿ ಹಾಗೂ ಬೆಂಗಳೂರಿನ ನಾರಾಯಣ ಜೆಟ್ಟಿ ನಡುವೆ ಕಾಳಗ ನಡೆಯಿತು.
ಜಂಬೂಸವಾರಿಯ ಆರಂಭಕ್ಕೂ ಮುನ್ನ ನಡೆಯುವ ವಜ್ರಮುಷ್ಟಿ ಕಾಳಗ ಬಹು ರೋಮಾಂಚನ ಹುಟ್ಟಿಸಿತು. ಇದೊಂದು ಸಾಂಪ್ರದಾಯಿಕ ಕ್ರೀಡೆಯಾದರೂ ಕೂಡ, ಐತಿಹಾಸಿಕ ಹಿನ್ನೆಲೆ ಹೊಂದಿದೆ.
ವಿಜಯದಶಮಿ ಮೆರವಣಿಗೆಗೂ ಮುನ್ನ ಅರಮನೆಯಲ್ಲಿ ಅನೇಕ ಸಂಪ್ರದಾಯ ಬದ್ಧ ಪೂಜಾ ವಿಧಾನಗಳನ್ನು ಅನುಸರಿಸಲಾಯಿತು. ವಿಜಯದಶಮಿ ದಿನದಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಅವರು ರಾಜ ಪೋಷಕು ಧರಿಸಿ ಕಲ್ಯಾಣ ಮಂಟಪಕ್ಕೆ ಬಂದರು. ಬಳಿಕ ಆಯುದ್ಧಗಳಿಗೆ ಉತ್ತರ ಪೂಜೆ ಸಲ್ಲಿಸಿ ಕೂಷ್ಮಾಂಡ ಛೇದಿಸಿದರು. ಈ ವೇಳೆ ಮಂಗಳಾಷ್ಟಕವನ್ನು ಅರಮನೆ ಜೋಯಿಸಲು ನೆರವೇರಿಸಿದರು.
ರಾಜವಂಶಸ್ಥರು ವಿಜಯಯಾತ್ರೆಗೆ ಹೊರಡುವಾಗ ಅರಮನೆ ಒಳ ಆವರಣದಲ್ಲಿ ವಜ್ರಮುಷ್ಟಿ ಕಾಳಗ ನೆರವೇರಿತು.
ಕಂಕಣಧಾರಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಅವರ ಆಗಮನವಾಗುತ್ತಿದ್ದಂತೆಯೇ ಕಾಳಗಕ್ಕೆ ಅಣಿಯಾದ ಜಟ್ಟಿಗಳು ತಮ್ಮ ಮುಷ್ಟಿಯಲ್ಲಿ ತಲೆಗೆ ಪೆಟ್ಟು ನೀಡಿದರೆ, ಎದುರಾಳಿ ಅದರಿಂದ ರಕ್ಷಿಸಿಕೊಂಡರು. ಅಂತಿಮವಾಗಿ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾದ ಬಳಿಕ ಈ ಕಾಳಗ ಅಂತ್ಯಗೊಂಡಿತು.
ಬಳಿಕ ಅರಮನೆ ವಿಜಯ ಯಾತ್ರೆಯಲ್ಲಿ ನಿಶಾನೆ ಆನೆ, ಪಟ್ಟದ ಕುದುರೆ, ಹಸು, ಮಹಾರಾಜರ ಲಾಂಛನ ಎಲ್ಲವನ್ನೂ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ಮಂಗಳವಾದ್ಯದ ಸಮೇತ ಆಗಮಿಸಿ, ಅಲ್ಲಿ ಬನ್ನಿಮಹಾಕಾಳಿ ಅಮ್ಮನವರ ಪೂಜೆ ನೆರವೇರಿಸಿದರು.