ಜನಸೇವೆಯಲ್ಲಿ ನಿರತರಾದ ವಿಎಕೆ ಫೌಂಡೇಶನ್

| Published : Aug 29 2025, 02:00 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಕಾರ್ಯಚಟುವಟಿಕೆಯೊಂದಿಗೆ ಗುರುತಿಸಿಕೊಂಡಿರುವ ವಿಎಕೆ ಫೌಂಡೇಶನ್‌ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ.

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಎಲ್ಲಿಯೇ ಏನೇ ಸಾರ್ವಜನಿಕ ಕಾರ್ಯಕ್ರಮಗಳಿರಲಿ ಅಲ್ಲಿ ಉಚಿತ ಸೇವೆ ನೀಡಲು "ವಿಎಕೆ ಫೌಂಡೇಶನ್‌ " ನಿರತವಾಗಿರುತ್ತದೆ. ಕಳೆದ ಏಳು ವರ್ಷಗಳಿಂದ ವೆಂಕಟೇಶ ಅಶೋಕ ಕಾಟವೆ ಸಂಸ್ಥಾಪಕತ್ವದ ವಿಎಕೆ ಫೌಂಡೇಶನ್‌ ಜನೋಪಯೋಗಿ ಕಾರ್ಯಚಟುವಟಿಕೆಯಲ್ಲಿ ಗುರುತಿಸಿಕೊಂಡಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಕಾರ್ಯಚಟುವಟಿಕೆಯೊಂದಿಗೆ ಗುರುತಿಸಿಕೊಂಡಿರುವ ವಿಎಕೆ ಫೌಂಡೇಶನ್‌ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಫೌಂಡೇಶನ್‌ನ ಅಡಿ ಜಿಲ್ಲೆಯ ಹಲವು ಪ್ರಾಥಮಿಕ ಶಾಲೆಗಳಲ್ಲಿನ 8 ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ ಹಾಗೂ ಪಠ್ಯಪರಿಕರಗಳನ್ನು ವಿತರಿಸಲಾಗಿದೆ. ಕಳೆದ 7 ವರ್ಷಗಳಿಂದ ದಸರಾ ಹಬ್ಬದ ವೇಳೆ ಬಡವರಿಗೆ ದವಸ-ಧಾನ್ಯ ಹೊಂದಿದ ಕಿಟ್‌ ವಿತರಿಸಲಾಗುತ್ತಿದ್ದು, 6 ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕಿಟ್‌ ವಿತರಿಸಲಾಗಿದೆ. ಈ ಬಾರಿಯ ದಸರಾ ವೇಳೆ 5 ಸಾವಿರ ಬಡವರಿಗೆ ದವಸ-ಧಾನ್ಯದ ಕಿಟ್‌ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ.

ಅನ್ನಪ್ರಸಾದಕ್ಕೆ ಸದಾ ಮುಂದು: ಯಾವುದೇ ಒಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರಲಿ ಅಲ್ಲಿ ವಿಎಕೆ ಫೌಂಡೇಶನ್‌ ಸೇವೆ ಇದ್ದೇ ಇರುತ್ತದೆ. ಎಲ್ಲಿಯಾದರೂ ಜಾತ್ರಾ ಮಹೋತ್ಸವ, ಧಾರ್ಮಿಕ ಸಮಾರಂಭ, ಮೆರವಣಿಗೆಗಳು ನಡೆಯುತ್ತಿದ್ದಲ್ಲಿ ಅಲ್ಲಿ ಫೌಂಡೇಶನ್‌ನ ಕಾರ್ಯಕರ್ತರು ಮುಂದೆ ನಿಂತು ಸಾವಿರಾರು ಜನರಿಗೆ ಉಚಿತವಾಗಿ ಉಪಾಹಾರ ಪೂರೈಸಲಾಗುತ್ತದೆ. ಕಳೆದ 7 ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಉಪಹಾರ ಸೇವೆ ಒದಗಿಸಿದ ಕೀರ್ತಿ ವಿಎಕೆ ಫೌಂಡೇಶನ್‌ಗಿದೆ.

ಈದ್ಗಾದಲ್ಲೂ ಉಪಾಹಾರ ವ್ಯವಸ್ಥೆ: ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಈದ್ಗಾ (ರಾಣಿ ಚೆನ್ನಮ್ಮ ಮೈದಾನ)ದಲ್ಲಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯುದ್ದಕ್ಕೂ ಫೌಂಡೇಶನ್‌ ವತಿಯಿಂದ ಸುಮಾರು 8ರಿಂದ 10 ಸಾವಿರ ಜನರಿಗೆ ಉಚಿತ ಉಪಾಹಾರ, ನೀರಿನ ಬಾಟಲ್‌ಗಳ ವಿತರಣೆ ನಡೆಯುತ್ತದೆ. ಇವರ ಸಾಮಾಜಿಕ ಕಾರ್ಯಚಟುವಟಿಕೆ ಗಮನಿಸಿ ಈ ಬಾರಿ ಈ ಉತ್ಸವ ಮಂಡಳಿಯ ಸದಸ್ಯರಾಗಿ ಹಾಗೂ ಸ್ವಾಗತ ಸಮಿತಿಯ ಸಂಚಾಲಕರನ್ನಾಗಿ ನೇಮಿಸಿದೆ. ಜತೆಗೆ ಬುಧವಾರ ಫೌಂಡೇಶನ್‌ನ ಅಧ್ಯಕ್ಷ ವೆಂಕಟೇಶ ಕಾಟವೆ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ, ಹೋಮ-ಹವನ ನೆರವೇರಿದವು.

ಬಡವರು, ನಿರ್ಗತಿಕರಿಗೆ ನನ್ನಿಂದ ಏನಾದರೂ ಅಳಿಲು ಸೇವೆ ಮಾಡಬೇಕೆಂಬ ಅಭಿಲಾಷೆಯೊಂದಿಗೆ ಫೌಂಡೇಶನ್‌ ಆರಂಭಿಸಿದ್ದೇನೆ. ಕಳೆದ ಏಳು ವರ್ಷಗಳಿಂದ ಫೌಂಡೇಶನ್‌ ಅಡಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆಯೂ ಹೊಸ ಹೊಸ ಕಾರ್ಯಕ್ರಮ ಕೈಗೊಳ್ಳುವ ಇಚ್ಛೆ ಹೊಂದಿದೆ ಎಂದು ವಿ.ಎ.ಕೆ. ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ಹೇಳಿದರು.