ಮಂಗಳೂರು: ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ವಿದ್ಯಾರ್ಥಿ-ಪೋಷಕರ ದಿಕ್ಸೂಚಿ ಕಾರ್ಯಕ್ರಮ ನಡೆಯಿತು.

ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಪೋಷಕರು ಮತ್ತು ಶಿಕ್ಷಕರ ಮೇಲಿನ ನಂಬಿಕೆ, ಶಿಸ್ತು ಹಾಗೂ ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬಹುದು. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಆ ಕನಸುಗಳನ್ನು ಸಾಕಾರಗೊಳಸಲು ಶ್ರಮಿಸಬೇಕು. ಒಬ್ಬರ ಭವಿಷ್ಯವು ಅವರು ಸಮಯವನ್ನು ಎಷ್ಟು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿಸಿದೆ ಎಂದರು.ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಸಕ್ರಿಯ ಪಾತ್ರ ವಹಿಸುತ್ತಾರೆ ಎಂದರು. ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸುವ ಮೂಲಕ ಅವರನ್ನು ಎಕ್ಸ್‌ಪರ್ಟ್ ಕುಟುಂಬಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.

ತಂತ್ರಜ್ಞಾನದ ಮಾಹಿತಿ ನೀಡಿದ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಅವರು, ನಗದು ರಹಿತ ವಹಿವಾಟುಗಳ ಮೂಲಕ ಕ್ಯಾಂಪಸ್‌ನಲ್ಲಿ ತಂತ್ರಜ್ಞಾನವು ವಿದ್ಯಾರ್ಥಿಗಳಿಗೆ ಹೇಗೆ ನೆರವಾಗುತ್ತದೆ ಮತ್ತು ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಆನ್‌ಲೈನ್ ಮೂಲಕ ಹೇಗೆ ಅರಿಯಬಹುದು ಎಂಬುದನ್ನು ವಿವರಿಸಿದರು.ಪ್ರಾಂಶುಪಾಲದ ಸುಬ್ರಮಣ್ಯ ಉಡುಪ ಅವರು ಕಾಲೇಜಿನ ನಿಯಮಗಳು, ಶೈಕ್ಷಣಿಕ ಶಿಸ್ತು, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಎಐಸಿಇ ಸಂಯೋಜಕ ಶ್ಯಾಮಪ್ರಸಾದ್ ಎಸ್. ಅವರು ವೃತ್ತಿಪರ ಕೋರ್ಸ್‌ಗಳಿಗಾಗಿ ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಶೈಕ್ಷಣಿಕ ಯೋಜನೆ ಮತ್ತು ಸಿದ್ಧತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಈ ದಿಕ್ಸೂಚಿ ಕಾರ್ಯಕ್ರಮವನ್ನು ಒಟ್ಟು ಐದು ಅವಧಿಗಳಲ್ಲಿ ನಡೆಸಲಾಯಿತು. ಉಪನ್ಯಾಸಕರಾದ ಅನಿತಾ ಪಿ. ಶೆಟ್ಟಿ, ಜಾಸ್ಮಿನ್ ಪ್ರತಿಭಾ ಮತ್ತು ಧೃತಿ ವಿ. ಹೆಗ್ಡೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಉಪಪ್ರಾಂಶುಪಾಲ(ಶೈಕ್ಷಣಿಕ) ಗುರುದತ್ತ ಎನ್, ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ, ವಿದ್ಯಾರ್ಥಿ ಆಪ್ತಸಮಾಲೋಚಕರಾದ ವಿದ್ಯಾಶಾರದಾ, ಶ್ರೀನಿವಾಸ ಕೆ. ಹಾಗೂ ಕಾರ್ಯಕ್ರಮ ನಿರ್ದೇಶಕ ರಕ್ಷಿತ್ ಎಂ. ಆರ್. ಇದ್ದರು.