ರೈತರಿಗೆ ಮಧುಮೇಹಿ ಸ್ನೇಹಿ ಭತ್ತ ಪರಿಚಯಿಸಿದ ವಾಲ್ಮಿ!

| Published : Nov 13 2023, 01:15 AM IST

ಸಾರಾಂಶ

ತೆಲಂಗಾಣದ ಆರ್‌ಎನ್‌ಆರ್‌-15048 ತಳಿ ಬೆಳೆದು ರೈತರಿಗೆ ಪರಿಚಯಿಸುತ್ತಿರುವ ವಾಲ್ಮಿ. ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ, ಕಡಿಮೆ ನೀರಲ್ಲಿ ಬೆಳೆಯುವ ಬತ್ತವಿದು. ಮಧುಮೇಹಿಗಳಿಗೆ ಸೂಕ್ತವಾದ ಬತ್ತದ ತಳಿ. ತುಂಗಭದ್ರಾ ಅಚ್ಚುಕಟ್ಟ ಸೇರಿದಂತೆ ಬತ್ತ ಬೆಳೆಯುವ ರೈತರಿಗೆ ವಾಲ್ಮಿಯಿಂದ ಈ ತಳಿ ಪರಿಚಯ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವ ಹಾಗೂ ಮಧುಮೇಹ ರೋಗಿಗಳಿಗೂ ಅನ್ನ ಊಟ ಮಾಡಲು ಅನುಕೂಲವಾಗುವ ಬತ್ತದ ತಳಿಯೊಂದನ್ನು ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ರೈತರಿಗೆ ಹೊಸದಾಗಿ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ.

ಈ ಹಿಂದೆ ವಾಲ್ಮಿ ಕೆರೆಯ ಕೆಳಭಾಗದ ಹಿಂದೆ ಇರುವ ಒಂಭತ್ತು ಎಕರೆ ಪ್ರದೇಶ ಹಲವು ವರ್ಷಗಳಿಂದ ಸಾಗುವಳಿಯಾಗದೇ ಪಾಳು ಬಿದ್ದಿತ್ತು. ವಾಲ್ಮಿ ನಿರ್ದೇಶಕರಾಗಿದ್ದ ಡಾ. ರಾಜೇಂದ್ರ ಪೋದ್ದಾರ ಮತ್ತು ಸದ್ಯದ ನಿರ್ದೇಶಕರಾದ ಬಸವರಾಜ ಬಂಡಿವಡ್ಡರ ಸಲಹೆಯಿಂದ ಬೀಳು ಪ್ರದೇಶವನ್ನು ಅಭಿವೃದ್ಧಿಪಡಿಸಿ ಇದೀಗ ಬಂಗಾರದಂಥ ಬತ್ತದ ಬೆಳೆಯನ್ನು ಬೆಳೆಯಲಾಗಿದೆ.

ಇತ್ತೀಚೆಗೆ ತೆಲಂಗಾಣಾದ ರೈಸ್ ಮತ್ತು ನ್ಯೂಟ್ರಿಷನ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಆರ್‌ಎನ್‌ಆರ್ –15048 ಎಂಬ ಬತ್ತದ ತಳಿ ಬಿಡುಗಡೆ ಮಾಡಿದೆ. ಇದಕ್ಕೆ “ತೆಲಂಗಾಣಾ ಸೋನಾ” ಎಂತಲೂ ಕರೆಯುತ್ತಾರೆ. ಈ ಬತ್ತವು ಕಡಿಮೆ ಗ್ಲೆಸಿಮಿಕ್ ಇಂಡೆಕ್ಸ್ (51.0ರಷ್ಟು) ಹೊಂದಿರುವುದರಿಂದ ಇದಕ್ಕೆ `ಡಯಾಫಿಟ್ ಪ್ಯಾಡಿ’ ಎಂತಲೂ ಕರೆಯುತ್ತಾರೆ. ಇದೀಗ ವಾಲ್ಮಿಯಲ್ಲಿ ಈ ಬತ್ತದ ತಳಿಯನ್ನು ಯಶಸ್ವಿಯಾಗಿ ಬೆಳೆದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸೇರಿದಂತೆ ರಾಜ್ಯದಲ್ಲಿ ಬತ್ತ ಬೆಳೆಯುವ ರೈತರಿಗೆ ಕ್ಷೇತ್ರೋತ್ಸವದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ರಾಜ್ಯದ ಬಹುತೇಕ ಪ್ರದೇಶದಲ್ಲಿ ರೈತರು ಸೋನಾ ಮಸೂರಿ ತಳಿಯನ್ನು ಬೆಳೆಯುತ್ತಿದ್ದಾರೆ. ಈ ತಳಿ ತಿನ್ನಲು ರುಚಿಕರವಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯೂ ಇದೆ. ಆದರೆ, ಈ ತಳಿಯು ಬೆಂಕಿ ರೋಗ ಮತ್ತು ಕಾಂಡ ಕವಚ ಕೊಳೆ ರೋಗಕ್ಕೆ ತೀವ್ರ ತುತ್ತಾಗುತ್ತದೆ. ಹೀಗಾಗಿ, ಈ ರೋಗಗಳ ಹತೋಟಿಗಾಗಿ ರೈತರು ಎರಡರಿಂದ ಮೂರು ಸಾರಿ ಶಿಲೀಂಧ್ರ ನಾಶಕವನ್ನು ಬಳಸಿ ರೋಗವನ್ನು ಹತೋಟಿಗೆ ತರುತ್ತಿದ್ದಾರೆ. ಇದರಿಂದ ಸಾಗುವಳಿ ವೆಚ್ಚ ಹೆಚ್ಚಾಗುವುದಲ್ಲದೇ, ಆಹಾರದಲ್ಲಿ ಕೀಟನಾಶಕಗಳ ಉಳಿಯುವಿಕೆ ಸಮಸ್ಯೆ ಉಂಟಾಗುತ್ತದೆ.

ಸದ್ಯ ಬಳಸುವ ಪಾಲಿಷ್ ಮಾಡಿದ ಸೋನಾ ಮಸೂರಿ ಅಕ್ಕಿಯಲ್ಲಿ ಶೇ. 73ರಷ್ಟು ಗ್ಲೆಸಿಮಿಕ್ ಇಂಡೆಕ್ಸ್ ಇದೆ. ಪ್ರಸ್ತುತ ರಾಜ್ಯದಲ್ಲಿ ಬಳಸಲಾಗುತ್ತಿರುವ ಸೋನಾ ಮಸೂರಿ ಅಕ್ಕಿಯಲ್ಲಿ ಗ್ಲೆಸಿಮಿಕ್ ಇಂಡೆಕ್ಸ್‌ನ ಪ್ರಮಾಣ ಹೆಚ್ಚಾಗಿರುವುದರಿಂದ ಈ ಅಕ್ಕಿ ತಿನ್ನುವುದನ್ನು ಕಡಿಮೆ ಮಾಡಿ ಎಂದು ವೈದ್ಯರು ಮಧುಮೇಹಿಗಳಿಗೆ ಅಥವಾ ಸಕ್ಕರೆ ಕಾಯಿಲೆ ಇರುವವರಿಗೆ ಸೂಚಿಸುತ್ತಾರೆ.

ಆದರೆ, ಈ ತಳಿಯು ಡಯಾಫಿಟ್ ಎಂದೇ ಹೆಸರು ಪಡೆದಿದೆಯಲ್ಲದೇ ಇತರ ತಳಿಗಳಿಗೆ ಹೋಲಿಸಿದರೆ ಕಡಿಮೆ ಗ್ಲೆಸಿಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಸಕ್ಕರೆ ಕಾಯಿಲೆ ಹೊಂದಿರುವವರಿಗೂ ಇದು ಉಪಯುಕ್ತವಾಗಿದೆ. ಈ ತಳಿಯು ಸೋನಾ ಮಸೂರಿ ಹಾಗೆ ಸೂಪರ್ ಫೈನ್ ಬತ್ತವಾಗಿದ್ದು, ಬೆಂಕಿ ರೋಗ ಮತ್ತು ಶೀತ್ ಬ್ಲೆಟ್ ರೋಗಕ್ಕೆ ನಿರೋಧಕತೆ ಹೊಂದಿದೆ. ಈ ತಳಿಯು ಹೆಚ್ಚಿನ ಹೆಡ್‌ರೈಸ್ ರಿಕವರಿ ಹೊಂದಿದೆ. ಇದು ತಡವಾದ ಬಿತ್ತನೆಯಾಗುವ ಪರಿಸ್ಥಿತಿಯಲ್ಲೂ ಸೂಕ್ತವಾಗಿದೆ. ಮುಂಗಾರು ಮತ್ತು ಹಿಂಗಾರು ಹಿಂಗಾಮಿನಲ್ಲಿ ಬೆಳೆಯುವ ಈ ತಳಿಯು 125 ದಿವಸಕ್ಕೆ ಮಾಗುತ್ತದೆ. ಇದರ ಇನ್ನೊಂದು ವಿಶೇಷ ಗುಣವೇನೆಂದರೆ ಸಾಮಾನ್ಯವಾಗಿ ನಾವು ಬಳಸುವ ಸೋನಾ ಮಸೂರಿ ಬತ್ತಕ್ಕಿಂತ ಶೇ. 5ರಷ್ಟು ಹೆಚ್ಚಿಗೆ ಪ್ರೋಟೀನ್ ಅಂಶವನ್ನು ಇದು ಹೊಂದಿದೆ. ಎಕರೆಗೆ ಸರಾಸರಿ 25ರಿಂದ 30 ಕ್ವಿ೦ಟಲ್‌ನಷ್ಟು ಇಳುವರಿ ಪಡೆಯಬಹುದಾಗಿದೆ ಎಂದು ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡರ ಪತ್ರಿಕೆಗೆ ಮಾಹಿತಿ ನೀಡಿದರು.

ತಳಿಯ ಬೀಜೋತ್ಪಾದನೆ ತಾಕನ್ನು ವಾಲ್ಮಿ ಕ್ಷೇತ್ರದಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಅಳವಡಿಸಲಾಗಿದೆ. ಬೀಜೋತ್ಪಾದನಾ ಕ್ಷೇತ್ರವನ್ನು ವಾಲ್ಮಿ ತಾಂತ್ರಿಕ ಸಿಬ್ಬಂದಿ ಮತ್ತು ಅಭಿಯಂತರ ಮಹಾದೇವಗೌಡ ಹುತ್ತನಗೌಡರ ನೇತೃತ್ವದಲ್ಲಿ ಅಳವಡಿಸಲಾಗಿದೆ. ವಾಲ್ಮಿ ಸಂಸ್ಥೆಯ ಸಮಾಲೋಚಕರಾದ ಡಾ. ವಿ.ಐ. ಬೆಣಗಿ ತಾಂತ್ರಿಕ ಮಾಹಿತಿ ನೀಡಿದ್ದಾರೆ.

ಹೆಕ್ಟೇರ್‌ಗೆ 28.09 ಕ್ವಿಂಟಲ್‌ ಉತ್ಪಾದನೆ

ಭಾರತದಲ್ಲಿ ವಿವಿಧ ಹಂಗಾಮುಗಳಲ್ಲಿ 47 ದಶಲಕ್ಷ ಹೆಕ್ಟೇರ್‌ನಷ್ಟು ಬತ್ತ ಬೆಳೆಯಲಾಗುತ್ತದೆ. ಮಾಹಿತಿ ಪ್ರಕಾರ, 2022-23ರಲ್ಲಿ ಒಟ್ಟು 1304.4 ಲಕ್ಷ ಟನ್ ಬತ್ತ ಉತ್ಪಾದನೆಯಾಗಿದೆ. ಉತ್ಪಾದಕತೆ ಪ್ರತಿ ಹೆಕ್ಟೇರ್‌ಗೆ 28.09 ಕ್ವಿಂಟಲ್‌ನಷ್ಟಿದೆ. ಕರ್ನಾಟಕದಲ್ಲಿ ಬತ್ತವು ನೀರಾವರಿ ಪ್ರದೇಶದಲ್ಲಿ 15.14 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದ್ದು, ಉತ್ಪಾದಕತೆಯು 47.7 ಕ್ವಿಂಟಲ್/ಹೆಕ್ಟೇರ್ ಆಗಿದೆ. ರಾಜ್ಯದಲ್ಲಿ ಗಂಗಾವತಿ, ಸಿಂಧನೂರು, ಭದ್ರಾವತಿ, ದಾವಣಗೆರೆ, ಕೆಕೆನಗರ, ರಾಯಚೂರು, ಶಿವಮೊಗ್ಗ ಮತ್ತು ಸಿರುಗುಪ್ಪ ಭಾಗಗಳಲ್ಲಿ ಹೆಚ್ಚು ಬತ್ತ ಬೆಳೆಯುವ ಪ್ರದೇಶವಾಗಿವೆ.

ಧಾರವಾಡದ ವಾಲ್ಮಿಯಲ್ಲಿ ಎಂಜಿನಿಯರ್‌ಗಳಿಗೆ ತರಬೇತಿ ಜತೆಗೆ ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಇದೀಗ ಆರ್‌ಎನ್‌ಆರ್ –15048 ಬತ್ತವನ್ನು ಕೇವಲ ಐದು ಕ್ಲಿಷ್ಟಕರ ಹಂತದಲ್ಲಿ ಮಾತ್ರ ನೀರು ಕೊಡಲಾಗಿದೆ. ರೈತರು ಬತ್ತ ಬೆಳೆಯಲು ನೀರು ನಿಲ್ಲಿಸಿ ಬೆಳೆದು ಸವಳು ಮತ್ತು ಜವಳು ಸಮಸ್ಯೆಗೆ ಕಾರಣವಾಗುತ್ತಿದೆ. ಆದ್ದರಿಂದ ರಾಜ್ಯದ ಬತ್ತ ಬೆಳೆಯುವ ರೈತರನ್ನು ವಾಲ್ಮಿಗೆ ಕರೆಯಿಸಿ ಅವರಿಗೆ ಈ ತಳಿಯ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಎನ್ನುತ್ತಾರೆ ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡರ.