ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದಲ್ಲಿ ಒಂದು ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ,ಇನ್ನೂ ೩-೪ ತಿಂಗಳಲ್ಲಿ ಭವನ ಸೇರಿದಂತೆ ವಾಲ್ಮೀಕಿ ಪುತ್ಥಳಿ ಅನಾವರಣವನ್ನು ಅದ್ದೂರಿಯಾಗಿ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ ವಾಲ್ಮೀಕಿ ಭವನ ಪೂರ್ಣವಾಗಿದ್ದರೂ ಕಾಂಪೌಂಡು ಹಾಗೂ ಇತರೆ ಸಣ್ಣ ಕೆಲಸಗಳು ಬಾಕಿ ಇದ್ದು, ಆ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಲ್ಮೀಕಿ ಸಮಾಜದ ರಾಜ್ಯನಾಯಕರನ್ನು, ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳನ್ನು ಕರೆಸಿ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಗುವುದು ಎಂದರು.
ಸಹಕಾರ ಕೋರಿದ ಶಾಸಕರುಈ ಹಿಂದೆ ಕೆಂಪೇಗೌಡ ಪುತ್ಥಳಿ ಅನಾವರಣದ ವಿಷಯದಲ್ಲಿ ಎಲ್ಲ ಜಾತಿ ಸಮುದಾಯಗಳು ಸಹಕಾರ ನೀಡಿದಂತೆ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೂ ಅದೇ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ತಿಂಗಳ ೧೭ ರಂದು ನಡೆಯಲಿರುವ ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಪಂಚಾಯ್ತಿಗಳಿಂದ ಪಲ್ಲಕ್ಕಿಗಳು ಭಾಗವಹಿಸುವಂತೆ ಪಂಚಾಯ್ತಿ ಅಧಿಕಾರಿಗಳು ನೋಡಿಕೊಳ್ಳಬೇಕೆಂದ ಶಾಸಕರು ಸಮುದಾಯದ ಸಾಧಕರಿಗೆ ಸನ್ಮಾನ ,ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಸಮುದಾಯದ ಮುಖಂಡರುಗಳಿಗೆ ಸೂಚಿಸಿದರು.ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನೆಡೆದ ವಾಲ್ಮೀಕಿ ಜಯಂತಿ ಪರ‍್ವಭಾವಿ ಸಭೆಯಲ್ಲಿ ತಾಲೂಕಿನಲ್ಲಿ ೨೦ ಸಾವಿರ ಜನಸಂಖ್ಯೆ ಹಾಗೂ ಐದಾರು ಸಮುದಾಯದ ಸಂಘಗಳಿರುವ ನಾಯಕ ಜನಾಂಗದಿಂದ ಕೇವಲ ಐದು ಮಂದಿ ಮಾತ್ರ ಭಾಗವಹಿಸಿದ್ದರು. ಇದು ಆಹ್ವಾನ ನೀಡುವಲ್ಲಿ ತಾಲೂಕು ಆಡಳಿತದ ನಿರ್ಲಕ್ಷ್ಯವೋ ಅಥವಾ ಐದಾರು ವರ್ಷದಿಂದ ಸಮುದಾಯಕ್ಕೆ ನೀಡಿದ್ದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಬಹಿಷ್ಕರಿಸಿದ್ದರೂ ಎಂಬುದು ಸಭೆಯಲ್ಲಿ ಪ್ರಶ್ನೆಯಾಗಿಯೇ ಉಳಿಯಿತು. ಆದರೆ ಇದೇ ವೇಳೆಗೆ ಬಂದಿದ್ದ ಕನ್ನಡ ಸಂಘಟನೆಗಳವರು ಸಭೆಯೊಳಗೆ ಬಂದ ಕಾರಣ ಸಭಾಂಗಣದ ಕುರ್ಚಿಗಳೆಲ್ಲ ಭರ್ತಿಯಾಗಿದ್ದವು.ತಹಸೀಲ್ದಾರ್ ಕೆ.ರಮೇಶ್ ,ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ್ ,ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯೀಂ ,ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ,ಪುರಸಭೆ ಸದಸ್ಯ ಇಂತಿಯಾಜ್ ,ಬನಹಳ್ಳಿ ಸತೀಶ್ ,ನಾಯಕ ಸಮುದಾಯದ ಮುಖಂಡರುಗಳಾದ ವಾಟರ್ ನಾರಾಯಣಸ್ವಾಮಿ ,ಹುಂಗೇನಹಳ್ಳಿ ವೆಂಕಟೇಶ್,ಸಂಚಿಕೆ ನಾರಾಯಣಪ್ಪ,ದ.ಸಂ.ಸ.ಯ ಎಸ್.ಎಂ.ವೆಂಕಟೇಶ್ ಇನ್ನಿತರರು ಇದ್ದರು.