ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸರ್ಕಾರದ ನಿಲುವನ್ನು ಖಂಡಿಸಿ ನಾಯಕ ಸಮುದಾಯ ವಾಲ್ಮೀಕಿ ಜಯಂತಿ ಸಭಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಘಟನೆ ನಡೆಯಿತು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ನಾಡಗೀತೆಯ ನಂತರ ಶಾಸಕ ಎನ್.ವೈ.ಗೋಪಾಲಕೃಷ್ಣ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೆ ಸೀಮಿತವಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ವೇದಿಕೆ ಮುಂಭಾಗದಲ್ಲಿ ಸೇರಿದ್ದ ತಾಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರ್ಪಡೆ ಗೊಳಿಸಬಾರದು. ಈಗಾಗಲೇ ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳನ್ನು ಸೇರ್ಪಡೆಯಾಗಿವೆ. ಈಗಿರುವ ಮೀಸಲಾತಿಯಲ್ಲಿ ಸಮರ್ಪಕವಾಗಿ ನ್ಯಾಯ ದೊರಕುತ್ತಿಲ್ಲ. ನಾಯಕ ಸಮುದಾಯ ಸಾಮಾಜಿಕವಾಗಿ. ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿಲ್ಲ ಇಂತಹ ಸಂಕಷ್ಟದ ನಡುವೆ ಕುರುಭ ಸಮುದಾಯವನ್ನು ಸೇರಿಸಿದ್ದಲ್ಲಿ
ಸಮುದಾಯ ರಾಜಕೀಯವಾಗಿ, ಶಿಕ್ಷಣಿವಾಗಿ ಅನ್ಯಾಯಕ್ಕೆ ಒಳಗಾಗುತ್ತಿದೆ. ಹಾಗಾಗಿ ಸರ್ಕಾರ ಇಂತಹ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಮುಖಂಡರಾದ ವಿ.ಮಾರನಾಯಕ, ಬಡೋಬಯ್ಯ, ನಾಗಸಮುದ್ರ ಗೋವಿಂದಪ್ಪ, ಬೊಮ್ಮದೇವರ ಹಳ್ಳಿ ಗೋವಿಂದಪ್ಪ, ಹಾನಗಲ್ ತಿಪ್ಪೇಸ್ವಾಮಿ, ವಕೀಲರಾದ ರಾಜಶೇಖರ ನಾಯಕ, ವಿಜಯ್,ಜಿ. ಪಿ.ಸುರೇಶ್, ಬಿಜಿಕೆರೆ ನಿಂಗಣ್ಣ, ಪೆನ್ನಯ್ಯ, ವೀರೇಶ, ಕೋನಸಾಗರ ಪಾಲಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಮಂಜಣ್ಣ ಸೇರಿದಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.ಇದಕ್ಕೂ ಮುನ್ನಾ ತಾಲೂಕು ಆಡಳಿತ ಕಚೇರಿ ಆವರಣದಿಂದ ವಾಲ್ಮೀಕಿ ಭಾವಚಿತ್ರದ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಪಟ್ಟಣದ ಮುಖ್ಯ ರಸ್ತೆಯಿಂದ ದೊಡ್ಡಪೇಟೆ ಮಾರ್ಗವಾಗಿ ಪಟ್ಟಣ ಪಂಚಾಯಿತಿ, ಬಸ್ ನಿಲ್ದಾಣದಿಂದ ವೇದಿಕೆ ಸ್ಥಳಕ್ಕೆ ಆಗಮಿಸಿತು. ಈ ವೇಳೆ ಯುವಕರು ಡಿಜೆ ಸಂಗೀತ ಮತ್ತು ಜನಪದ ವಾದ್ಯಗಳ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.
ಈ ವೇಳೆ ದ್ರಾಕ್ಷರಸ ಹಾಗೂ ವೈನ್ ಬೋರ್ಡ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿ, ಕಳೆದ ಬಿಜೆಪಿ ಸರ್ಕಾರದಲ್ಲಿ ಕುರುಭ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ವರದಿ ಸಲ್ಲಿಸಿತ್ತು. ಅದೇ ವರದಿ ಈಗ ಚರ್ಚೆಯಲ್ಲಿದೆ. ಸಾಮಾಜಿಕ ನ್ಯಾಯಕ ಹರಿಕಾರರಾದ ಮುಖ್ಯಮಂತ್ರಿ ಯಾವುದೇ ವರ್ಗಕ್ಕೆ ಅನ್ಯಾಯ ಮಾಡಲ್ಲ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ಸಿಪಿಐ ವಸಂತ ವಿ. ಅಸೂದೇ, ತಾಲೂಕು ಪಂಚಾಯಿತಿ ಈ.ಒ.ಹನುಮಂತಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸೈಯ್ಯದ್ ನಾಸಿರುದ್ದೀನ್, ಮುಖ್ಯಾಧಿಕಾರಿ ಲಿಂಗರಾಜ ಇದ್ದರು.
ಸಿಎಂ ಸಿದ್ದರಾಮಯ್ಯ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಭರವಸೆ ಇದೆ
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎನ್.ವೈ.ಗೋಪಾಲಕೃಷ್ಣ ಸಿಎಂ ಸಿದ್ದರಾಮಯ್ಯನವರು ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡದೇ ನ್ಯಾಯ ಕಲ್ಪಿಸುವ ಭರವಸೆ ಇದೆ. ಅಂತಹ ಸಂದರ್ಭದಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತೇವೆ. ಯಾರಿಗೂ ಅನುಮಾನ ಬೇಡ. ಸದಾ ಸಮುದಾಯದ ಪರವಾಗಿರುತ್ತೇನೆ ಎಂದು ವಾಲ್ಮೀಕಿ ಜಯಂತಿ ಸಭಾ ಬಹಿಷ್ಕರಿಸಿದ ಕ್ರಮದ ಕುರಿತು ಸಮುದಾಯಕ್ಕೆ ತಿಳಿಸಿದರು.