ಜಿಲ್ಲೆಯ ಸುರಪುರ ನಗರದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿರುವ ಸರ್ವೆ ನಂಬರ್ 7/1 ರಲ್ಲಿನ 6 ಎಕರೆ 15 ಗುಂಟೆ ಖಾರಿಜ್ ಖಾತಾ ಭೂಮಿಯಲ್ಲಿನ ನಾಲ್ಕು ಎಕರೆ ಜಮೀನನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ಸುರಪುರ ನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ನಗರದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿರುವ ಸರ್ವೆ ನಂಬರ್ 7/1 ರಲ್ಲಿನ 6 ಎಕರೆ 15 ಗುಂಟೆ ಖಾರಿಜ್ ಖಾತಾ ಭೂಮಿಯಲ್ಲಿನ ನಾಲ್ಕು ಎಕರೆ ಜಮೀನನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ಸುರಪುರ ನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೋಲಪಲ್ಲಿಯ ಶ್ರೀ ವಾಲ್ಮೀಕಿ ಗುರುಪೀಠ ಶಾಖಾ ಮಠದ ಶ್ರೀ ವರದಾನೇಶ್ವರ ಮಹಾಸ್ವಾಮಿಜಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಈ ಎಲ್ಲ ಭೂಮಿ ಸುರಪುರದ ಅರಸರಿಗೆ ಸೇರಿದ ಭೂಮಿ. ಆದರೆ ಅರಸರು ತಮಗಾಗಿ ಏನನ್ನು ಉಳಿಸಿಕೊಳ್ಳದೆ, ಜನರಿಗಾಗಿ ದಾನ ಮಾಡಿದ್ದಾರೆ. ಈಗ ಕೇಳುತ್ತಿರುವ ಪ್ರಭು ಕಾಲೇಜು ಮೈದಾನದಲ್ಲಿನ ಖಾರಿಜ್ ಖಾತಾ ಭೂಮಿಯು ಕೂಡ ಸುರಪುರ ಅರಸರಿಗೆ ಸೇರಿದ್ದು, ಇದು ಸುಮಾರು 45 ವರ್ಷಗಳಿಂದ ಕಬ್ಜದಲ್ಲಿದೆ. ಈ ಜಾಗದಲ್ಲಿ ಸುರಪುರ ಅರಸರ ವಸ್ತು ಸಂಗ್ರಹಾಲಯ, ಶ್ರೀ ಮಹರ್ಷಿ ವಾಲ್ಮೀಕಿ ಹೆಸರಿನ ಉದ್ಯಾನವನ ಸಮುದಾಯ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಸುತ್ತಿಲ್ಲ. ಆದ್ದರಿಂದ ಈಗ ಸುರಪುರ ಬಂದ್ ಹಾಗೂ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ವೇಳೆ ಈ ಪ್ರತಿಭಟನೆಗೆ ಸ್ಪಂದಿಸದಿದ್ದಲ್ಲಿ ಸುರಪುರದ ಗಾಂಧಿ ವೃತ್ತದಲ್ಲಿ ನಿರಂತರ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಶ್ರೀ ನಾಲ್ವಡಿ ರಾಜ ವೆಂಕಟಪ್ಪ ನಾಯಕ ವೃತ್ತದಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ತಮ್ಮ ಬೇಡಿಕೆ ಈಡೇರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಬಸ್ ನಿಲ್ದಾಣದ ಬಳಿಯಲ್ಲಿ ದಲಿತ ಸಂಘಟನೆಗಳಿಂದ ಧರಣಿ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಪರವಾನಿಗೆ ಪಡೆಯದೆ ಧರಣಿ ನಡೆಸುತ್ತಿದ್ದು ಕೂಡಲೇ ಆ ಧರಣಿ ಸ್ಥಳವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ನಂತರ ಮಹಾತ್ಮಾಗಾಂಧಿ ವೃತ್ತದಲ್ಲಿ ಧರಣಿಯನ್ನು ನಡೆಸಿದಾಗ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಶಂಕರ್ ಅವರು ಆಗಮಿಸಿ ಧರಣಿಯನ್ನು ನಿಲ್ಲಿಸುವಂತೆ ಮನವೊಲಿಸಿದರು. ಇದಕ್ಕೆ ಒಪ್ಪದಿದ್ದಾಗ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿಭಟನಾಕಾರರು 25ನೇ ತಾರೀಕಿನವರೆಗೂ ಗಡುವು ನೀಡಿ ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಇದೇ ತಿಂಗಳು 26ನೇ ತಾರೀಖಿನಿಂದ ಮತ್ತೆ ನಿರಂತರ ಧರಣಿ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಸೋಮವಾರ ಮುಂಜಾನೆಯಿಂದ ಸಾಯಂಕಾಲದವರೆಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ನಿಂತು ವಾಹನ ಸವಾರರು ಪರದಾಡಿದರು‌. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಜಾವೀದ್ ಇನಾಂದಾರ್ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಸುರಪುರ ತಾಲೂಕು ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೇಮನೂರ, ಶಹಾಪುರ ತಾಲೂಕ ಅಧ್ಯಕ್ಷ ಮರೆಪ್ಪ ಪ್ಯಾಟಿ ಹಾಗೂ ಮುಖಂಡರಾದ ಭೀಮು ಎಚ್ ನಾಯಕ್, ನಾಗರಾಜ ಪ್ಯಾಪ್ಲಿ, ರಮೇಶ ದೊರೆ, ರಾಮು ನಾಯಕ ಅರಳಹಳ್ಳಿ, ಶಿವಮೋನಯ್ಯ ನಾಯಕ, ವೆಂಕಟೇಶ ಬೇಟೆಗಾರ, ತಿರುಪತಿ ನಾಯಕ, ಶಿವರಾಜ ಪಾಟೀಲ, ವಾಲ್ಮೀಕಿ ನಾಯಕ, ವಾಸುದೇವ ನಾಯಕ, ಷಣ್ಮುಖ ನಾಯಕ, ಹನುಮಂತ ಕಟ್ಟಿಮನಿ, ಹನುಮ ಗೌಡ ರುಕ್ಮಾಪುರ, ಯಲ್ಲಪ್ಪ ಕಲ್ಲೋಡಿ, ಸಂಜೀವ ನಾಯಕ, ಪರಮಣ್ಣ ಒಡಕೇರಿ, ರಂಗನಾಥ ನಾಯಕ, ಪರಶುರಾಮ ನಾಯಕ, ದೇವು ನಾಯಕ, ಮೌನೇಶ ನಾಯಕ, ನಾಗರಾಜ ನಾಯಕ, ವಿನಯ ನಾಯಕ, ತಿರುಪತಿ ಆರ್ಯ ಶಂಕರ, ವೆಂಕಟೇಶ ನಾಯಕ, ವಾಸುದೇವ ನಾಯಕ, ಕನಕಾಚಲ ನಾಯಕ, ನಾಗೇಂದ್ರ ದೊರೆ, ಉಸ್ತಾದ್‌ ವಜಾಹತ್ ಹುಸೇನ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ತಮ್ಮ ಬೇಡಿಕೆಯನ್ನು ಈಡೇರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.