ವಾಲ್ಮೀಕಿ ನಿಗಮದ ₹87 ಕೋಟಿ ಅಕ್ರಮ ತನಿಖೆಗೂ ಎಸ್‌ಐಟಿ

| Published : Jun 01 2024, 12:46 AM IST / Updated: Jun 01 2024, 08:40 AM IST

Karnataka Valmiki Maharshi

ಸಾರಾಂಶ

ಸಿಬಿಐ ತನಿಖೆಗೆ ಯೂನಿಯನ್‌ ಬ್ಯಾಂಕ್‌ ಪ್ರಕರಣವನ್ನು ದಾಖಲಿಸಬೇಕು ಎಂದು ಪತ್ರ ಬರೆದ ಬೆನ್ನಲ್ಲೇ ಸರ್ಕಾರದ ಆದೇಶವಾಗಿದ್ದು, ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಕೇಸ್‌ನಲ್ಲಿ ತನಿಖೆ ಚುರುಕುಗೊಂಡಿದೆ.

 ಬೆಂಗಳೂರು :  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಅಕ್ರಮವಾಗಿ ನಡೆದಿದೆ ಎನ್ನಲಾದ 87 ಕೋಟಿ ರು. ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮನೀಶ್ ಖರ್ಬೀಕರ್‌ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಿವಮೊಗ್ಗ ಜಿಲ್ಲೆ ವಿನೋಬನಗರದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಅವರು ಆರ್ಥಿಕ ಅವ್ಯವಹಾರದ ಬಗ್ಗೆ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಪತ್ರದಲ್ಲಿ ಸಚಿವ ಬಿ.ನಾಗೇಂದ್ರ ಅವರ ಮೌಖಿಕ ಸೂಚನೆ ಮೇರೆಗೆ ನಡೆದ ಅಕ್ರಮ ವರ್ಗಾವಣೆ ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಇದರ ನಡುವೆ ಯೂನಿಯನ್‌ ಬ್ಯಾಂಕ್‌ ತಮ್ಮ ಬ್ಯಾಂಕ್‌ನಲ್ಲಿ ಆಗಿರುವ ಅಕ್ರಮ ಹಣ ವರ್ಗಾವಣೆ ಬಗ್ಗೆ ಸಿಬಿಐಗೆ ದೂರು ನೀಡಿದೆ.

ಇದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಹಿರಿಯ ಸಚಿವರಾದ ಡಾ.ಜಿ. ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಮತ್ತಿತರರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಎಸ್‌ಐಟಿ ರಚನೆ ನಿರ್ಧಾರ ಮಾಡಿದರು. ಇದರಂತೆ ಒಳಾಡಳಿತ ಇಲಾಖೆಯು ಶುಕ್ರವಾರ ಸಂಜೆ ಎಸ್‌ಐಟಿ ರಚನೆ ಮಾಡಿ ಆದೇಶ ಹೊರಡಿಸಿದೆ.

ನಾಲ್ಕು ಸದಸ್ಯರ ವಿಶೇಷ ತನಿಖಾ ತಂಡ:

ಎಸ್‌ಐಟಿಗೆ ಮುಖ್ಯಸ್ಥರಾಗಿ ಮನೀಶ್‌ ಖರ್ಬೀಕರ್‌ರನ್ನು ನೇಮಿಸಿದ್ದು ಬೆಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತ ವಾರ್ತೆ ಪೊಲೀಸ್‌ ಅಧೀಕ್ಷಕ ಹರಿರಾಮ್‌ ಶಂಕರ್‌, ಸಿಐಡಿ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ. ಹೆಗಡೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಎಸ್ಐಟಿಯು ಶಿವಮೊಗ್ಗದಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ನಿಗಮದ ಮುಖ್ಯ ನಿಬಂಧಕ ಎ.ರಾಜಶೇಖರನ್‌ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ನೀಡಿರುವ ಕ್ರಿಮಿನಲ್‌ ದೂರು ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಎಸ್ಐಟಿಗೆ ವರ್ಗಾವಣೆ ಮಾಡಬೇಕು. ಎಸ್‌ಐಟಿ ಸಮಗ್ರವಾಗಿ ತನಿಖೆ ನಡೆಸಿ ಪೊಲೀಸ್‌ ಇಲಾಖೆ ಮೂಲಕ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.