ವಾಲ್ಮೀಕಿ ನಿಗಮದ ಹಗರಣ: ಸಿಐಡಿಯಿಂದ ತನಿಖೆ ಚುರುಕು

| Published : May 31 2024, 02:17 AM IST

ಸಾರಾಂಶ

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಸಂಬಂಧ ಮಾಹಿತಿ ನೀಡುವಂತೆ ಸಿಐಡಿ ಅಧಿಕಾರಿಗಳು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ.

ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿರುವ ನಿಗಮದ ಖಾತೆಯಿಂದ ಐಟಿ ಕಂಪನಿ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಬ್ಯಾಂಕ್‌ಗಳ 14 ಖಾತೆಗಳಿಗೆ 94.73 ಕೋಟಿ ರು. ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಅಕ್ರಮ ಹಣ ವರ್ಗಾವಣೆ ಸಂಬಂಧ ಮಾಹಿತಿ ನೀಡುವಂತೆ ಸಿಐಡಿ ಅಧಿಕಾರಿಗಳು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಈ ಹಿಂದೆ ವಸಂತನಗರದ ಯೂನಿಯನ್‌ ಬ್ಯಾಂಕ್‌ ಇಂಡಿಯಾ ಶಾಖೆಯಲ್ಲಿ ಖಾತೆ ಹೊಂದಿತ್ತು. ಈ ಖಾತೆಯನ್ನು 2024ರ ಫೆ.19ರಂದು ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಬಳಿಕ 2024ರ ಮಾ.4ರಂದು 25 ಕೋಟಿ ರು., ಮಾ.6ರಂದು 25 ಕೋಟಿ ರು., ಮಾ.21ರಂದು 44 ಕೋಟಿ ರು., ಮಾ.22ರಂದು 33 ಕೋಟಿ ರು. ಹಾಗೂ ಮೇ 21ರಂದು 50 ಕೋಟಿ ರು. ಸೇರಿದಂತೆ ಒಟ್ಟು 187.33 ಕೋಟಿ ರು. ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ರಾಜ್ಯ ಖಜಾನೆ-2ರಿಂದ ನಿಗಮದ ಖಾತೆಗೆ ಜಮೆಯಾಗಿತ್ತು.

ಖಾತೆ ವರ್ಗಾವಣೆಯಾದ ಬಳಿಕ ಬ್ಯಾಂಕಿನವರು ನಿಗಮಕ್ಕೆ ಯಾವುದೇ ಚೆಕ್‌ ಬುಕ್‌, ಪಾಸ್‌ ಬುಕ್‌ ನೀಡಿಲ್ಲ. ನಿಗಮದ ಅಧಿಕಾರಿಗಳು ನಿಗಮದ ಖಾತೆಯನ್ನು ಪರಿಶೀಲಿಸಿದಾಗ ದಾಖಲಾತಿಗಳು, ಆರ್‌ಟಿಜಿಎಸ್‌ ಬೋರ್ಡ್‌ ರೆಸುಲ್ಯೂಷನ್‌ ಜತೆಗೆ ನಕಲಿ ಸಹಿ ಮಾಡಿ ಅಕ್ರಮವಾಗಿ ವಿವಿಧ ಖಾತೆಗಳಿಗೆ ಒಟ್ಟು 94.73 ಕೋಟಿ ರು. ವರ್ಗಾಯಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಬ್ಯಾಂಕಿನವರು ಸಮರ್ಪಕ ಉತ್ತರ ನೀಡಿಲ್ಲ. ಈ ಸಂಬಂಧ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.