ಸಾರಾಂಶ
ಪ್ರಕರಣದ ತನಿಖೆ ನಿಯಮ ಪ್ರಕಾರವೇ ನಡೆಯುತ್ತಿದೆ. ಈಗಾಗಲೇ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಸ್ಐಟಿ ತನಿಖೆ ಜತೆಗೆ ಇಡಿ ಸಹ ಪ್ರವೇಶಿಸಿದೆ. ಹೀಗಾಗಿ ತನಿಖೆ ಸಂರ್ಪೂಣ ಪಾರದರ್ಶಕವಾಗಿರಲಿದೆ.
ಧಾರವಾಡ:
ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ ಕುರಿತು ಪಾರದರ್ಶಕ ತನಿಖೆ ನಡೆಯುತ್ತಿದೆ. ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿರುವ ಕುರಿತು ಮಾಹಿತಿ ಬಂದಿದೆ. ಈ ಪ್ರಕರಣದಲ್ಲಿ ಕಾನೂನು ಕ್ರಮ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಕರಣದ ತನಿಖೆ ನಿಯಮ ಪ್ರಕಾರವೇ ನಡೆಯುತ್ತಿದೆ. ಈಗಾಗಲೇ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಸ್ಐಟಿ ತನಿಖೆ ಜತೆಗೆ ಇಡಿ ಸಹ ಪ್ರವೇಶಿಸಿದೆ. ಹೀಗಾಗಿ ತನಿಖೆ ಸಂರ್ಪೂಣ ಪಾರದರ್ಶಕವಾಗಿರಲಿದೆ ಎಂದರು.
ಭ್ರಷ್ಟಾಚಾರ ಆಗಿದೆಯೋ ಇಲ್ಲವೋ? ಎಂಬುದು ವರದಿ ಬಂದ ಮೇಲೆ ಗೊತ್ತಾಗಲಿದೆ. ಎಲೆಕ್ಟ್ರೋಲ್ ಬಾಂಡ್‌ನಲ್ಲಿ ಭ್ರಷ್ಟಾಚಾರ ಆಗಿದೆಯೋ? ಇಲ್ಲವೋ? ಎಂಬುದರ ಕುರಿತು ಮಾಧ್ಯಮದವರು ಬಿ.ವೈ. ವಿಜಯೇಂದ್ರ ಅವರನ್ನೇ ಕೇಳಬೇಕು ಎಂದು ಸಲಹೆಯನ್ನೂ ನೀಡಿದರು.ರಾಜ್ಯದಲ್ಲಿ ಅಭಿವೃದ್ಧಿ ನಿರಂತರವಾಗಿದೆ. ನಾವು ನೀಡಿರುವ ಗ್ಯಾರಂಟಿಯಿಂದ ವಿಪಕ್ಷಗಳಿಗೆ ಹೊಟ್ಟೆಕಿಚ್ಚಾಗಿದೆ. ಹೀಗಾಗಿ ಮನಸ್ಸಿಗೆ ಬಂದಿದ್ದನ್ನು ಹೇಳುತ್ತಿದ್ದಾರೆ. ಅವರ ಕಾಲದಲ್ಲಿ ಏನು ಅಭಿವೃದ್ಧಿಯಾಗಿದೆ? 10 ವರ್ಷ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಅಭಿವೃದ್ಧಿ ಏನಾಗಿದೆ? ಎಂದು ಎಲ್ಲರಿಗೂ ತಿಳಿದಿದೆ ಎಂದು ವ್ಯಂಗ್ಯವಾಡಿದರು.
ಬಸವರಾಜ ರಾಯರೆಡ್ಡಿ ಅನುದಾನದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವ ರೀತಿ ಅನುದಾನ ಬಂದಿಲ್ಲ ಎನ್ನುವುದು ಅವರ ವೈಯಕ್ತಿಕ ವಿಚಾರ. ಇದನ್ನು ಅವರನ್ನೇ ಕೇಳಬೇಕು. ರಾಯರಡ್ಡಿ ಅವರು ಹಿರಿಯ ನಾಯಕರು. ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕೇಳಿರುವ ಹೆಚ್ಚಿನ ಅನುದಾನ ಸಿಕ್ಕಿಲ್ಲ ಎಂದು ಹಾಗೆ ಹೇಳಿರಬಹುದು ಎಂದರು.