ಸಾರಾಂಶ
ಚಾಮರಾಜನಗರ: ನಾಯಕ ಸಮುದಾಯದ 10 ವರ್ಷಗಳ ಬೇಡಿಕೆಯಾದ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಅ.17ರಂದು ಜಿಲ್ಲಾಡಳಿತ ಶಂಕುಸ್ಥಾಪನೆ ಮಾಡದಿದ್ದರೆ ನಾಯಕ ಸಮುದಾಯದಿಂದ ಹೋರಾಟ ಮಾಡಲು ಸಿದ್ಧವಾಗಲಿದೆ ಎಂದು ತಾಲೂಕು ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ ಎಚ್ಚರಿಸಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಾಯಣ ಬರೆದು ಇಡೀ ಜಗತ್ತಿಗೆ ರಾಮನನ್ನು ಪರಿಚಯ ಮಾಡಿಕೊಟ್ಟ ಸ್ವಾಭಿಮಾನದ ಸಂಕೇತವಾದ ಶ್ರೀವಾಲ್ಮೀಕಿ ಪುತ್ಥಳಿಗೆ ನಿರ್ಮಾಣಕ್ಕೆ ಜಿಲ್ಲಾಡಳಿತ ಕಳೆದ ವರ್ಷದಿಂದ ದಿವ್ಯನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದು ದೂರಿದರು. ಜಿಲ್ಲಾಡಳಿತ ಅ.17 ರಂದು ವಾಲ್ಮೀಕಿ ಜಯಂತಿ ದಿನದಂದು ಶಂಕುಸ್ಥಾಪನೆ ಮಾಡದಿದ್ದರೆ ಜಿಲ್ಲಾಡಳಿತ ನಡೆಸುವ ವಾಲ್ಮೀಕಿ ಸರ್ಕಾರಿ ಕಾರ್ಯಕ್ರಮ ಬಹಿಷ್ಕರಿಸಿ, ಅಂದು ಸಮುದಾಯದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡು ನಗರದ ಪ್ರವಾಸಿಮಂದಿರದಿಂದ ನಾಯಕರ ವಿದ್ಯಾರ್ಥಿ ನಿಲಯದ ವರಗೆ ವಾಲ್ಮೀಕಿ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ಮಾಡಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ತದನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಗುದ್ದಲಿಪೂಜೆ ಮಾಡಲಾಗುವುದು ಎಂದರು.ಈಗಾಗಲೇ ಜಿಲ್ಲೆಯ ಮುಖಂಡರು ಸಭೆ ನಡೆಸಿ, ಜಿಲ್ಲಾಡಳಿತ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಮುಂದಾಗದಿದ್ದರೆ ಸರ್ಕಾರಿ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದವರು ಯಾರು ಭಾಗವಹಿಸದಂತೆ ನಿರ್ಧರಿಸಲಾಗಿದ್ದು, ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಸರ್ಕಾರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತೀರ್ಮಾನಕೈಗೊಳ್ಳಲಾಗಿದೆ ಒಟ್ಟರೆ ಜಿಲ್ಲೆಯ ನಾಯಕ ಸಮುದಾಯ ಬೇಡಿಕೆ ಇದಾಗಿದ್ದು, ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡುವ ತನಕ ಸಮುದಾಯ ನಿರಂತರ ಹೋರಾಟ ಮಾಡಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ ಮಾತನಾಡಿ, ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಮೈಸೂರಿನಲ್ಲಿ ಬೇಡಿಕೆ ಇಟ್ಟಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ದಿನಕ್ಕೆ ವಾಲ್ಮೀಕಿ ಪುತ್ಥಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಚಾಮರಾಜನಗರದಲ್ಲಿ ವಾಲ್ಮೀಕಿ ಸಮುದಾಯ ಬೇಡಿಕೆ ಇಟ್ಟರೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತೋರಿದ್ದಾರೆ. ಶಂಕುಸ್ಥಾಪನೆ ಮಾಡಲು ಮುಂದಾಗಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ನಾಯಕರ ಸಂಘದ ಮುಖಂಡರಾದ ನಗರಸಭಾ ಸದಸ್ಯ ಶಿವರಾಜ್, ಕಂಡಕ್ಟರ್ ಸೋಮನಾಯಕ, ಮಹದೇವನಾಯಕ ಬಿ.ಕಾಂ, ಜಯಸುಂದರ್, ವೆಂಕಟರಮಣನಾಯಕ ಹಾಜರಿದ್ದರು.