ಸಮಾಜದಲ್ಲಿ ಎಲ್ಲರಿಗೂ ಅವಕಾಶಗಳು ಸಿಗಬೇಕು: ಕೆ. ರಾಮರಾಜನ್

| Published : Oct 29 2023, 01:01 AM IST

ಸಮಾಜದಲ್ಲಿ ಎಲ್ಲರಿಗೂ ಅವಕಾಶಗಳು ಸಿಗಬೇಕು: ಕೆ. ರಾಮರಾಜನ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಎಲ್ಲರೂ ಸಮಾನ ಅವಕಾಶ ಪಡೆಯಬೇಕು- ರಾಮರಾಜನ್ನ್‌
ಕನ್ನಡಪ್ರಭ ವಾರ್ತೆ ಮಡಿಕೇರಿ ವಿಶ್ವದ ಗುರುವಾದ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದ್ದಾರೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣ ಬರೆಯುವ ಮೂಲಕ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ತೋರಿರುವ ದಾರಿಯಲ್ಲಿ ನಡೆಯಬೇಕು. ಇಡೀ ದಕ್ಷಿಣ ಏಷ್ಯಾದಲ್ಲಿಯೇ ವಾಲ್ಮೀಕಿ ರಾಮಾಯಣ ಕಥೆಗಳನ್ನು ಅಧ್ಯಯನ ಮಾಡಬಹುದಾಗಿದೆ. ಎಂದು ಕೆ. ರಾಮರಾಜನ್ ನುಡಿದರು. ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ರಾಮಾಯಣದ ಮೂಲಕ ಎಲ್ಲೆಡೆ ಕಾಣಬಹುದಾಗಿದೆ. ಅವರ ಆದರ್ಶ ಗುಣಗಳು ಇಂದಿಗೂ ಸಹ ಮಾದರಿಯಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಮಾತನಾಡಿ ವಾಲ್ಮೀಕಿ ಅವರ ಮೂಲ ರಾಮಾಯಣ ಮಹತ್ವದ್ದಾಗಿದೆ. ಭಾರತೀಯರೆಲ್ಲರೂ ಸಹ ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡುವಂತಾಗಬೇಕು. ಶ್ರೀರಾಮನನ್ನು ವ್ಯಕ್ತಿಯಾಗಿ ನೋಡುವುದಲ್ಲ. ವ್ಯಕ್ತಿತ್ವವಾಗಿ ನೋಡುತ್ತೇವೆ. ಸಮಾಜದಲ್ಲಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದಾಗಿದೆ. ವಾಲ್ಮೀಕಿ ರಾಮಾಯಣ ಓದುವುದರಿಂದ ಹೆಚ್ಚಿನ ಜ್ಞಾನ ದೊರೆಯುತ್ತದೆ ಎಂದು ತಿಳಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ ಆರ್. ಹೆಗಡೆ ಮಾತನಾಡಿ ರಾಮಾಯಣ ಮಹಾಗ್ರಂಥದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಶಾಲೆಗಳಲ್ಲಿ ರಾಮಾಯಣ ಕಥೆಗಳನ್ನು ಹೇಳುವಂತಾಗಬೇಕು. ವಾಲ್ಮೀಕಿ ರಾಮಾಯಣ ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಹೇಳಿದರು. ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಅಶೋಕ್ ಮಾತನಾಡಿ ಕೊಡಗು ಜಿಲ್ಲೆಯ ಎಲ್ಲಿಯಾದರೂ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಕೋರಿದರು. ಆದಿವಾಸಿ ಜನರ ಏಳಿಗೆಗಾಗಿ ಶ್ರಮಿಸಿದ ಜೆ.ಪಿ.ರಾಜು ಅವರನ್ನು ಸನ್ಮಾನಿಸಲಾಯಿತು. ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ವೈದ್ಯಕೀಯ ಪದವಿ ಪ್ರವೇಶ ಪಡೆದಿರುವ ರೋಹನ್ ಸುರೇಶ್ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತರ್ ಜಾತಿ ವಿವಾಹಿತರಿಗೆ 3 ಲಕ್ಷ ರು. ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.ಕಾನೂನು ಪದವಿ ಪಡೆದು ಎರಡು ವರ್ಷಗಳ ಕಾಲ ತರಬೇತಿ ಪಡೆಯಲು ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆದೇಶ ಪತ್ರ ನೀಡಲಾಯಿತು. ಚೆನ್ನಂಗಿ ಬಸವನಹಳ್ಳಿ ಸರ್ಕಾರಿ ವಸತಿ ಶಾಲೆಯ ಮತ್ತು ಮರೂರು ತಿತಿಮತಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮೂಡಿಬಂತು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಆದಿವಾಸಿ ಪ್ರಮುಖರಾದ ಕುಡಿಯರ ಮುತ್ತಪ್ಪ, ಮಿಟ್ಟು ರಂಜತ್, ಮುತ್ತಮ್ಮ, ಆರ್.ಕೆ.ಚಂದ್ರು, ಜೆ.ಪಿ.ರಾಜು, ಇತರರು ಇದ್ದರು. ಪವನ್ ಕುಮಾರ್ ನಿರೂಪಿಸಿದರು. ಎಸ್. ಹೊನ್ನೇಗೌಡ ಸ್ವಾಗತಿಸಿದರು. ಬಾಳುಗೋಡು ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲ ದಿಲನ್ ಮುತ್ತಣ್ಣ ವಂದಿಸಿದರು. ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಗಾಂಧಿ ಮಂಟಪದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಪಾಲ್ಗೊಂಡಿದ್ದರು. ಹುಣಸೂರಿನ ಡೊಳ್ಳು ಕುಣಿತ ಕಲಾ ತಂಡದ ಪ್ರದರ್ಶನ ಗಮನ ಸೆಳೆಯಿತು. ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆ ನಡೆಯಿತು.