ಸಾರಾಂಶ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರದ ಆದಿಕವಿ, ರಾಮಾಯಣ ಮಹಾಕಾವ್ಯ ಬರೆದ ಶ್ರೇಷ್ಠ ಕವಿ ವಾಲ್ಮೀಕಿ ಅವರು ಹುಟ್ಟಿದ ದಿನವನ್ನು ನಾಡಿನ ಎಲ್ಲೆಡೆ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು 24 ಸಾವಿರ ಸಂಸ್ಕೃತ ಶ್ಲೋಕಗಳ ಒಂದು ಬೃಹತ್ ಗ್ರಂಥವನ್ನು ರಚಿಸಿರುವುದು ವಿಶೇಷವಾಗಿದೆ ಎಂದು ಎನ್.ಎಸ್.ಭೋಸರಾಜು ಅವರು ತಿಳಿಸಿದರು. ಮಹರ್ಷಿ ವಾಲ್ಮೀಕಿಯವರು ರಾಮಾಯಣವನ್ನು ವಿದ್ವತ್ ಪೂರ್ಣವಾಗಿ ಬರೆದಿದ್ದಾರೆ. ರಾಮಾಯಣ ಬರೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ ಎಂದು ಸಚಿವರು ನುಡಿದರು. ವಾಲ್ಮೀಕಿಯ ಮಾತೃ ವಾತ್ಸಲ್ಯದ ಕುರಿತು ರಾಮಾಯಣದಲ್ಲಿಯೇ ಸಾಕಷ್ಟು ಮಾಹಿತಿ ಸಿಗುತ್ತದೆ. ಪುರಾಣ ಮತ್ತು ಐತಿಹ್ಯಗಳ ವಿಭಿನ್ನ ನಿರೂಪಣೆಗಳ ನಡುವೆ ವಾಲ್ಮೀಕಿ ಹೇಗೆ ಪ್ರಸ್ತುತರಾಗುತ್ತಾರೆ ಎಂಬುದನ್ನು ನಾವೆಲ್ಲಾ ಅರಿತುಕೊಳ್ಳಬೇಕು. ವಾಲ್ಮೀಕಿಯವರ ಚಿಂತನೆಗಳು, ಬರವಣಿಗೆಗಳನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದು ನುಡಿದರು. ಶಾಸಕರಾದ ಡಾ.ಮಂತರ್‌ಗೌಡ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣ ಬರೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಅಖಂಡ ಭಾರತದಲ್ಲಿ ಮಹರ್ಷಿ ವಾಲ್ಮೀಕಿ ಅವರು ತೋರಿಸಿರುವ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಇಡೀ ದಕ್ಷಿಣ ಏಷ್ಯಾದಲ್ಲಿಯೇ ವಾಲ್ಮೀಕಿ ರಾಮಾಯಣ ಕಥೆಯನ್ನು ಕಾಣಬಹುದಾಗಿದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು. ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಆರ್.ಭಾರತಿ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ರಾಮಾಯಣದ ಮೂಲಕ ಎಲ್ಲೆಡೆ ಕಾಣಬಹುದಾಗಿದೆ. ಅವರ ಆದರ್ಶ ಗುಣಗಳು ಇಂದಿಗೂ ಮಾದರಿಯಾಗಿದೆ ಎಂದು ನುಡಿದರು. ಭಾರತೀಯರಾದ ಪ್ರತಿಯೊಬ್ಬರೂ ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಬೇಕು. ಸಮಾಜದಲ್ಲಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದಾಗಿದೆ. ರಾಮಾಯಣ ಮಹಾಗ್ರಂಥದಲ್ಲಿ ಭಾರತೀಯ ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದರು. ಸಾಮಾನ್ಯ ಕುಟುಂಬದಿಂದ ಬಂದ ಮಹರ್ಷಿ ವಾಲ್ಮೀಕಿ ಅವರು ಹಲವು ಶ್ಲೋಕಗಳನ್ನು ಬರೆಯುವ ಮೂಲಕ, ರಾಮಾಯಣ ಮಹತ್ವವನ್ನು ಕಾಣಬಹುದಾಗಿದೆ ಎಂದು ಭಾರತಿ ಅವರು ವಿವರಿಸಿದರು. ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಅಶೋಕ್ ಅವರು ಮಾತನಾಡಿ, ವಾಲ್ಮೀಕಿ ರಾಮಾಯಣವು ಇಂದಿಗೂ ಸಹ ಪ್ರಸ್ತುತವಾಗಿದ್ದು, ಬದುಕಿನಲ್ಲಿ ತನ್ನದೇ ಆದ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದರು. ‘ವಾಲ್ಮೀಕಿ ಸಮಾಜವು ಗುರುಭಕ್ತಿಗೆ ಬೆರಳುಕೊಟ್ಟ, ದೈವಭಕ್ತಿಗೆ ಕಣ್ಣು ಕೊಟ್ಟ, ರಕ್ಷಣೆಗಾಗಿ ಖಡ್ಗ ಹಿಡಿದ, ಸನ್ಮಾರ್ಗಕ್ಕಾಗಿ ಧರ್ಮಗ್ರಂಥ ರಚಿಸಿದ ಸಮಾಜವಾಗಿದೆ ಎಂದು ಅಶೋಕ್ ಅವರು ವಿವರಿಸಿದರು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೌರ ಕಾರ್ಮಿಕರು, ಪರಿಶಿಷ್ಟ ಪಂಗಡದ ರೈತರು ಹಾಗೂ ಸೈನಿಕರು ಈ ವಿಭಾಗದಲ್ಲಿ ತಲಾ ಒಬ್ಬರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಅಂತರ್ ಜಾತಿ ವಿವಾಹಿತ 10 ದಂಪತಿಗಳಿಗೆ ತಲಾ 3 ಲಕ್ಷ ರು. ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಚೆನ್ನಂಗಿ ಬಸವನಹಳ್ಳಿ ಸರ್ಕಾರಿ ವಸತಿ ಶಾಲೆ, ಮರೂರು ತಿತಿಮತಿ ವಸತಿ ಶಾಲೆ, ಕೋತೂರು ವಾಲ್ಮೀಕಿ ಆಶ್ರಮ ಶಾಲೆ, ಕರಿಕೆ ಆಶ್ರಮ ಶಾಲೆ, ಮೊರಾಜಿ ದೇಸಾಯಿ ವಸತಿ ಶಾಲೆ ಹಾಗೂ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ನೃತ್ಯ ಪ್ರದರ್ಶನ ಗಮನ ಸೆಳೆದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಪ್ರಮುಖರಾದ ಪರಮೇಶ್, ಗಂಗಾಧರ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಇತರರು ಇದ್ದರು. ಪವನ್ ಕುಮಾರ್ ನಿರೂಪಿಸಿದರು. ಹೊನ್ನೇಗೌಡ ಸ್ವಾಗತಿಸಿದರು. ಬಾಳುಗೋಡು ಏಕಲವ್ಯ ವಸತಿ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲರಾದ ದಿಲನ್ ಮುತ್ತಣ್ಣ ವಂದಿಸಿದರು.