ವಾಲ್ಮೀಕಿ ತತ್ವಾದರ್ಶ ಸಾರ್ವಕಾಲಿಕ

| Published : Oct 19 2024, 12:38 AM IST

ಸಾರಾಂಶ

ಚಿತ್ರದುರ್ಗ: ವಾಲ್ಮೀಕಿ ಋಷಿಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹದ್ದಾಗಿವೆ. ರಾಮಾಯಣದ ಮೂಲಕ ವಾಲ್ಮೀಕಿ ಮುನಿಗಳು ಬದುಕಿನ ಆದರ್ಶದ ಎಲ್ಲ ಆಯಾಮಗಳನ್ನು ಸುಂದರವಾಗಿ ರಚಿಸಿ ಚಿರನೂತನ ಹಾಗೂ ಚಿರಚೇತನವಾಗಿ ಉಳಿಯುವಂತಹ ಅಮೂಲ್ಯ ಕೊಡುಗೆಯನ್ನು ಮನುಕುಲಕ್ಕೆ ಸಮರ್ಪಿಸಿ ಜನರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ ಎಂದು ಯೋಗಗುರು ರವಿ ಕೆ.ಅಂಬೇಕರ್ ಹೇಳಿದರು.

ಚಿತ್ರದುರ್ಗ: ವಾಲ್ಮೀಕಿ ಋಷಿಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹದ್ದಾಗಿವೆ. ರಾಮಾಯಣದ ಮೂಲಕ ವಾಲ್ಮೀಕಿ ಮುನಿಗಳು ಬದುಕಿನ ಆದರ್ಶದ ಎಲ್ಲ ಆಯಾಮಗಳನ್ನು ಸುಂದರವಾಗಿ ರಚಿಸಿ ಚಿರನೂತನ ಹಾಗೂ ಚಿರಚೇತನವಾಗಿ ಉಳಿಯುವಂತಹ ಅಮೂಲ್ಯ ಕೊಡುಗೆಯನ್ನು ಮನುಕುಲಕ್ಕೆ ಸಮರ್ಪಿಸಿ ಜನರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ ಎಂದು ಯೋಗಗುರು ರವಿ ಕೆ.ಅಂಬೇಕರ್ ಹೇಳಿದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಪ್ರಗತಿ ವಿದ್ಯಾಮಂದಿರ ಯೋಗ ಶಾಖೆಯಲ್ಲಿ ಹಮ್ಮಿಕೊಳ್ಳಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಮಹರ್ಷಿ ಜಾತ್ಯತೀತ ವ್ಯಕ್ತಿ. ಸಮಾಜ ಸುಧಾರಕ, ಶಿಕ್ಷಣ ತಜ್ಞನೂ ಹೌದು. ಲವಕುಶರು ಸಕಲ ವಿದ್ಯಾ ಪಾರಂಗತರಾಗಿದ್ದುದು ಇದಕ್ಕೆ ಸಾಕ್ಷಿ ಎಂದು ತಿಳಿಸಿದರು. ಯೋಗ ಸಂಸ್ಥೆಯ ನಿರ್ದೇಶಕ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ಮಲ್ಲಿಕಾರ್ಜುನ ಚಾರ್ ಮಾತನಾಡಿ, ವಾಲ್ಮೀಕಿ ರಾಮಾಯಣದಲ್ಲಿ ಪ್ರೀತಿ, ತ್ಯಾಗ, ದೃಢತೆ ಮತ್ತು ಖ್ಯಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ದುಃಖ ಮತ್ತು ವಿಪತ್ತುಗಳು ಮನುಷ್ಯನ ಜೀವನದ ಎರಡು ಅತಿಥಿಗಳು ಎಂಬುದನ್ನು ಮಹರ್ಷಿ ವಾಲ್ಮೀಕಿಯು ತೋರಿಸಿಕೊಟ್ಟಿದ್ದಾರೆ ಎಂದರು. ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಪುರಾಣದ ಪ್ರಕಾರ ವಾಲ್ಮೀಕಿ ಮುನಿಗಳು ಮಹರ್ಷಿ ಆಗುವುದಕ್ಕಿಂತ ಮುಂಚೆ ಒಬ್ಬ ಕಳ್ಳ ದರೋಡೆಕಾರನಾಗಿದ್ದವರು. ನಾರದಮುನಿಗಳ ಪರಿಚಯದಿಂದ ಒಬ್ಬ ಆದರ್ಶ ವ್ಯಕ್ತಿಯಾಗಿ ಶ್ರೀರಾಮಾಯಣ ಚರಿತೆಯನ್ನು ರಚಿಸಿದರು. ಒಬ್ಬ ವ್ಯಕ್ತಿ ಒಳ್ಳೆಯವರ ಸಹವಾಸದಿಂದ ಹೇಗೆ ಬದಲಾಗಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ ಎಂದರು. ಯೋಗ ಶಿಕ್ಷಕರಾದ ವಸಂತಲಕ್ಷ್ಮಿ, ಮಂಜುಳಾ, ಹಾಗೂ ಯೋಗ ಸಾಧಕರಾದ ಪಲ್ಲವಿ, ರಚನ, ಲೀಲಾವತಿ, ಶಾಂತಮ್ಮ ಹಾಗೂ ಜಗಜ್ಯೋತಿ ಭಾಗವಹಿದ್ಧರು.