ರಾಮಾಯಣ ಗ್ರಂಥ ಮೂಲಕ ಜ್ಞಾನಬೆಳಕು ಪಸರಿಸಿದ ವಾಲ್ಮೀಕಿ: ಡಾ. ವಸುಮತಿಗೌಡ
KannadaprabhaNewsNetwork | Published : Oct 29 2023, 01:00 AM IST
ರಾಮಾಯಣ ಗ್ರಂಥ ಮೂಲಕ ಜ್ಞಾನಬೆಳಕು ಪಸರಿಸಿದ ವಾಲ್ಮೀಕಿ: ಡಾ. ವಸುಮತಿಗೌಡ
ಕನ್ನಡಪ್ರಭವಾರ್ತೆ ಸಾಗರ ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ಪ್ರಸರಿಸಿದ ಹೆಗ್ಗಳಿಕೆ ಕವಿ ವಾಲ್ಮೀಕಿಗೆ ಸಲ್ಲುತ್ತದೆ ಎಂದು ಉಪನ್ಯಾಸಕಿ ಡಾ.ವಸುಮತಿಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಮಾನವೀಯ ಮತ್ತು ಸಾಮಾಜಿಕ ಮೌಲ್ಯದ ಪ್ರತಿಪಾದನೆಯಾಗಿದೆ ಎಂದರು. ಶ್ರೀರಾಮನ ದೇವಸದೃಶ್ಯ ಮಾನವ ರೂಪವನ್ನು ಚಿತ್ರಿಸುವ ಕೆಲಸವನ್ನು ವಾಲ್ಮೀಕಿ ಮಾಡಿದ್ದಾರೆ. ಆದಿಕವಿ ವಾಲ್ಮೀಕಿ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವತ್ತ ಯುವಪೀಳಿಗೆ ಗಮನ ಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಮಾತನಾಡಿ, ದರೋಡೆಕೋರನೊಬ್ಬ ಮಹರ್ಷಿಯಾಗಿ, ವಾಲ್ಮೀಕಿ ಹೆಸರಿನಿಂದ ಗುರುತಿಸಿಕೊಂಡು ಸಾಗಿದ ದಾರಿಯಲ್ಲಿ ನಮಗೆ ಅವರ ಮಾನಸಿಕ ಸ್ಥೈರ್ಯ ಮತ್ತು ಸಂಕಲ್ಪ ಎದ್ದು ಕಾಣುತ್ತದೆ. ಸಂಕಲ್ಪವಿಲ್ಲದೇ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎನ್ನುವುದು ವಾಲ್ಮೀಕಿ ಅವರ ಬದುಕಿನಿಂದ ಕಂಡುಕೊಳ್ಳಬಹುದು ಎಂದು ಹೇಳಿದರು. ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮಹ್ಮದ್ ಹನೀಫ್, ಪಂಚಾಯತ್‌ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಪ್ಪೇಸ್ವಾಮಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ನಾಗೇಂದ್ರಪ್ಪ ದೊಡ್ಮನಿ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹನಿ ಸ್ವಾಗತಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು. ನಾಗಭೂಷಣ್ ವಂದಿಸಿದರು. - - - -28ಕೆ.ಎಸ್.ಎ.ಜಿ.1: ವಾಲ್ಮೀಕಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.