ಬಳ್ಳಾರಿ ಲೋಕಸಭಾ ಚುನಾವಣೆಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ವಾಲ್ಮೀಕಿ ನಿಗಮದ 20 ಕೋಟಿ ಬಳಕೆ!

| Published : Sep 11 2024, 01:30 AM IST / Updated: Sep 11 2024, 07:08 AM IST

MLA Nagendra
ಬಳ್ಳಾರಿ ಲೋಕಸಭಾ ಚುನಾವಣೆಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ವಾಲ್ಮೀಕಿ ನಿಗಮದ 20 ಕೋಟಿ ಬಳಕೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ’ದ ಬಹುಕೋಟಿ ಹಗರಣದ ಪ್ರಮುಖ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಎಂದು ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.  

 ಬೆಂಗಳೂರು :  ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ’ದ ಬಹುಕೋಟಿ ಹಗರಣದ ಪ್ರಮುಖ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಎಂದು ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ. ಅಲ್ಲದೆ ನಿಗಮದ 20.19 ಕೋಟಿ ರು. ಹಣವನ್ನು ಇತ್ತೀಚಿನ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಜೊತೆಗೆ ನಿಗಮದ ಅನುದಾನ ದುರ್ಬಳಕೆ, ಸಾಕ್ಷಿನಾಶ, ಅಪರಾಧಿಕ ಒಳಸಂಚಿಗೆ ನಾಗೇಂದ್ರ ಅವರೇ ಪ್ರಮುಖವಾಗಿ ಕಾರಣ ಎಂದು ಹೇಳಿದೆ.

ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪಪಟ್ಟಿ ಸಲ್ಲಿಕೆ ಮಾಡಿರುವ ಇ.ಡಿ. ಅಧಿಕಾರಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆಯಲ್ಲಿ ಬಿ.ನಾಗೇಂದ್ರ ಪ್ರಮುಖ ಪಾತ್ರ ಇದೆ ಎಂದು ಉಲ್ಲೇಖಿಸಿ ಮೊದಲನೇ ಆರೋಪಿಯನ್ನಾಗಿ ಮಾಡಿದೆ.

ನಂ.1 ಆರೋಪಿ:

ಇ.ಡಿ. ತನಿಖೆಗೂ ಮುನ್ನ ರಾಜ್ಯ ಸರ್ಕಾರದ ಎಸ್‌ಐಟಿ ತಂಡವು ತನಿಖೆ ಕೈಗೊಂಡಿದ್ದು, ಎಸ್‌ಐಟಿ ತಂಡವು ಬಿ.ನಾಗೇಂದ್ರ ಪಾತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಆದರೆ, ಇ.ಡಿ. ಅಧಿಕಾರಿಗಳು ಪ್ರಕರಣದಲ್ಲಿ ಮೊದಲನೇ ಆರೋಪಿಯನ್ನಾಗಿ ಮಾಡಿ ಆರೋಪ ಪಟ್ಟಿ ಸಲ್ಲಿಸಿದೆ.

ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ವರ್ಮಾ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ನಾಗೇಂದ್ರ ಅವರು ಸತ್ಯನಾರಾಯಣ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯನ್ನು ದೋಷಾರೋಪಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮೂರನೇ ಆರೋಪಿಯನ್ನಾಗಿ ನಾಗೇಂದ್ರ ಆಪ್ತ ಇಟ್ಕರಿ ಸತ್ಯನಾರಾಯಣ, ನಾಲ್ಕನೇ ಆರೋಪಿಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌, ಇನ್ನುಳಿದಂತೆ ಬಿ.ನಾಗೇಂದ್ರ ಆಪ್ತ ಕಾರ್ಯದರ್ಶಿ ವಿಜಯ್ ಕುಮಾರ್, ನಿಗಮದ ಸಿಬ್ಬಂದಿ ಪರಶುರಾಮ್ ಸೇರಿದಂತೆ ಒಟ್ಟು 25 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ 15 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಚುನಾವಣೆಗೆ 20 ಕೋಟಿ ರು. ಬಳಕೆ:

ನಾಗೇಂದ್ರ ಅಣತಿಯಂತೆ ಸಂಪೂರ್ಣ ಹಣದ ವಹಿವಾಟು ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರಕ್ಕೆ 20.19 ಕೋಟಿ ರು. ಬಳಕೆ ಮಾಡಲಾಗಿದೆ. ಇದು ನಿಗಮದ ಅನುದಾನವಾಗಿದೆ. ವಿವಿಧ ಬ್ಯಾಂಕ್‌ಗಳಿಗೆ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ಬೂತ್‌ ಮಟ್ಟದಲ್ಲಿ ಹಂಚಿಕೆ ಮಾಡಲಾಗಿದೆ. 8ನೇ ಆರೋಪಿ ಆಭಿಷೇಕಗೌಡ ಮತ್ತು ಮತ್ತೋರ್ವ ಆರೋಪಿ ವಿಜಯ್‌ಕುಮಾರ್‌ ಅವರ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಹಣ ಹಂಚಿಕೆ ಮಾಹಿತಿ ಬಹಿರಂಗಗೊಂಡಿದೆ. ಅಲ್ಲದೇ, ನಗದು ಹಣದ ಚಿತ್ರ ಸೇರಿ ಇತರೆ ಸಾಕ್ಷ್ಯಗಳು ಸಹ ಲಭ್ಯವಾಗಿವೆ ಎಂದು ಇ.ಡಿ. ತಿಳಿಸಿದೆ.

ದಾಖಲೆ ನಾಶ:

ಸಚಿವರಾಗಿದ್ದ ನಾಗೇಂದ್ರ, ತಮ್ಮ ವ್ಯಾಪ್ತಿಗೆ ಬರುವ ಇಲಾಖೆಯ ಅನುದಾನ ದುರ್ಬಳಕೆ, ಸಾಕ್ಷಿನಾಶ, ಅಪರಾಧಿಕ ಒಳಸಂಚಿಗೆ ಕಾರಣರಾಗಿದ್ದಾರೆ. ಹಲವು ಬ್ಯಾಂಕ್‌ ಖಾತೆ ತೆಗೆದು ನಿಗಮದ ಹಣ ಲಪಟಾಯಿಸಲಾಗಿದೆ. ಪ್ರಕರಣ ಸಂಬಂಧ ದಾಖಲೆ ಸಹ ನಾಶ ಮಾಡಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್‌ ದಾಖಲೆ, ಮೊಬೆಲ್‌ ಸಾಕ್ಷ್ಯಗಳು ಸಿಕ್ಕಿವೆ. ಇದಲ್ಲದೇ, ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳಿದ್ದ ಬ್ಯಾಂಕ್‌ ಖಾತೆ ಸೇರಿ ಹಲವು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.

ನಾಗೇಂದ್ರ ಸೂಚನೆ ಮೇರೆಗೆ ಕೃತ್ಯ:

ನಾಗೇಂದ್ರ ಸೂಚನೆ ಮೇರೆಗೆ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಸಂಚು ರೂಪಿಸಿದ್ದೇ ಸ್ವತಃ ನಾಗೇಂದ್ರ. ಇದಕ್ಕಾಗಿ ಎಂ.ಜಿ.ರಸ್ತೆಯಲ್ಲಿನ ಯೂನಿಯನ್‌ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯಲಾಗಿತ್ತು. ನಾಗೇಂದ್ರ ತಮ್ಮ ಆಪ್ತರ ಮೂಲಕ ಅಕ್ರಮದ ಕಾರ್ಯಾಚರಣೆ ಮಾಡಿದ್ದು, ಇತರರು ಹಗರಣದಲ್ಲಿ ಶಾಮೀಲಾಗಿದ್ದಾರೆ. ಈ ಬಗ್ಗೆ ಬಂಧನಕ್ಕೊಳಗಾದ ನಿಗಮದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇಲಾಖೆಗಳಿಂದಲೇ ನಿಯಮ ಉಲ್ಲಂಘನೆ?:

ಆರೋಪಪಟ್ಟಿಯಲ್ಲಿ ಹಣಕಾಸು ಇಲಾಖೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯತನದ ಕುರಿತು ಉಲ್ಲೇಖಿಸಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣದ ಬಗ್ಗೆ ಸರಿಯಾಗಿ ಗಮನಹರಿಸದೆ ನಿರ್ಲಕ್ಷ್ಯತನ ತೋರಿದೆ ಎಂದು ತಿಳಿಸಲಾಗಿದೆ.

ದದ್ದಲ್‌ ಹೆಸರು ಪ್ರಸ್ತಾಪ ಇಲ್ಲ:

ವಾಲ್ಮೀಕಿ ನಿಗಮದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಹೆಸರನ್ನು ಇ.ಡಿ. ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ವಿಚಾರಣೆ ವೇಳೆ ಹಗರಣದಲ್ಲಿ ದದ್ದಲ್‌ ಪಾತ್ರದ ಕುರಿತು ಸಾಕ್ಷ್ಯಗಳು ಲಭ್ಯವಾಗದ ಕಾರಣ ಆರೋಪಪಟ್ಟಿಯಲ್ಲಿ ಹೆಸರು ಪ್ರಸ್ತಾಪಿಸಿಲ್ಲ ಎಂದು ಹೇಳಲಾಗಿದೆ. ಆದರೆ, ಬಸನಗೌಡ ದದ್ದಲ್‌ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆದಿರುವ ಬಗ್ಗೆ ತಿಳಿಸಲಾಗಿದೆ ಎನ್ನಲಾಗಿದೆ.

ಹಗರಣ ಹಿನ್ನೆಲೆ:

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಚಂದ್ರಶೇಖರನ್ ಹಗರಣದ ಕುರಿತು ಮರಣ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿತು. ಮರಣ ಪತ್ರದಲ್ಲಿ ಬ್ಯಾಂಕ್‌ನ ಅಧಿಕಾರಿಗಳು, ನಿಗಮದ ಅಧಿಕಾರಿಗಳ ಹೆಸರು ಮತ್ತು ಸಚಿವರು ಎಂದು ಉಲ್ಲೇಖಿಸಿದ್ದರು. ನಿಗಮದ ಖಾತೆಯಲ್ಲಿದ್ದ 187 ಕೋಟಿ ರು. ಹಣವನ್ನು ದುರ್ಬಳಕೆ ಬಗ್ಗೆ ಪ್ರಸ್ತಾಪಿಸಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಎಸ್ಐಟಿ ತಂಡ ತನಿಖೆ ಕೈಗೊಂಡಿದ್ದರೂ, ಕೆಲವರ ದೂರಿನ ಮೇರೆಗೆ ಇಡಿ ಸಹ ತನಿಖೆ ಕೈಗೊಂಡಿತ್ತು. ನಂತರ ನಾಗೇಂದ್ರ ಅವರನ್ನು ಬಂಧಿಸಿತ್ತು.

--ಆರೋಪಪಟ್ಟಿಯಲ್ಲಿ ಏನಿದೆ?

- ನಾಗೇಂದ್ರ ಅಣತಿಯಂತೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ವಹಿವಾಟು

- ನಿಗಮದಿಂದ 20.19 ಕೋಟಿ ರು. ಪಡೆದು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಸಲಾಗಿದೆ- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಬಳ್ಳಾರಿಯ ವಿವಿಧ ಬೂತ್‌ಗಳಲ್ಲಿ ಹಂಚಲಾಗಿದೆ

- ಆಪ್ತರ ಮೂಲಕ ಹಣ ವರ್ಗಾವಣೆ ಕೆಲಸವನ್ನು ಮಾಜಿ ಸಚಿವ ನಾಗೇಂದ್ರ ಮಾಡಿಸಿದ್ದಾರೆ

--

ಎಸ್‌ಐಟಿ ಚಾರ್ಜ್‌ಶೀಟಲ್ಲಿ ನಾಗೇಂದ್ರ ಹೆಸರಿರಲಿಲ್ಲ!

ಇ.ಡಿ. ತನಿಖೆಗೂ ಮುನ್ನ ರಾಜ್ಯ ಸರ್ಕಾರದ ಎಸ್‌ಐಟಿ ತಂಡವು ತನಿಖೆ ಕೈಗೊಂಡಿತ್ತು. ಎಸ್‌ಐಟಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಬಿ.ನಾಗೇಂದ್ರ ಪಾತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ.