ಸಾರಾಂಶ
ಯಲಬುರ್ಗಾ:ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಬದಲಾಗಿದ್ದು. ಅಂದಿನ ರಾಜಕಾರಣದಲ್ಲಿ ಇರುವಂತಹ ಮೌಲ್ಯ ಇಂದಿನ ರಾಜಕಾರಣದಲ್ಲಿ ಉಳಿದಿಲ್ಲ ಗೌರವ, ಘನತೆ ತೀರಾ ಕಡಿಮೆಯಾಗಿದೆ. ಮೌಲ್ಯಯುತ ರಾಜಕಾರಣಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ತಾಲೂಕಾಡಳಿತ ಹಾಗೂ ತಾಪಂ ಸಹಯೋಗದಲ್ಲಿ ಮಂಗಳವಾರ ನಡೆದ ಯಲಬುರ್ಗಾ ಹೋಬಳಿ ವಿಸ್ತರಣಾ ಕೇಂದ್ರ ಬೇವೂರು ನೂತನ ಕಚೇರಿ ಉದ್ಘಾಟನೆ ಹಾಗೂ ತಾಲೂಕಿನ ಹಿರೇವಡ್ರಕಲ್ ಗ್ರಾಮದ ಡ್ರೋನ್ ಸರ್ವೇ ಆಧಾರಿತ ಕರಡು ಪಹಣಿ ಪತ್ರಿಕೆಗಳ ಸಾಂಕೇತಿಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆಯವರ ಜತೆ ಸಚಿವರಾಗಿ ಕೆಲಸ ಮಾಡಿದ ಹಿರಿಯ ಅನುಭವಿ ಮೌಲ್ಯಯುತ ರಾಜಕಾರಣಿಗಳಲ್ಲಿ ರಾಯರಡ್ಡಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯಕ್ಕೆ ಅವರು ಬಹುದೊಡ್ಡ ಆಸ್ತಿಯಾಗಿದ್ದಾರೆ. ರಾಜ್ಯದಲ್ಲಿ ಹೊಸ ತಾಲೂಕು ಹಾಗೂ ಹೋಬಳಿ ಕೇಂದ್ರ ಸ್ಥಾಪನೆಗೆ ಸಾಕಷ್ಟು ಬೇಡಿಕೆ ಬಂದಿದ್ದು, ಆದರೆ ಅವುಗಳಿಗೆ ಮಂಜೂರಾತಿ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮೋದನೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಯಲಬುರ್ಗಾ ತಾಲೂಕಿನ ಬೇವೂರು ಹೋಬಳಿ ಸೇವಾ ವಿತರಣಾ ಕೇಂದ್ರಕ್ಕೆ ಶಾಸಕ ಬಸವರಾಜ ರಾಯರಡ್ಡಿ ಅವರ ರೈತಪರ ಕಳಿಕಳಿ, ಕಾಳಜಿಯ ಪರಿಶ್ರಮದಿಂದ ಇದು ಪ್ರಾರಂಭಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ವಿಜಯನಗರ ಜಿಲ್ಲೆ ಹೆಸರಿಗೆ ಮಾತ್ರ ಘೋಷಣೆ ಮಾಡಿದರು. ಅದರ ಅಭಿವೃದ್ಧಿಗೆ ಅನುದಾನ ನೀಡಿರಲಿಲ್ಲ. ಹಿಂದಿನ ಎಲ್ಲವುಗಳಿಗೂ ಅಗತ್ಯ ಸೌಕರ್ಯ ಕಲ್ಪಿಸಿ ಅಭಿವೃದ್ಧಿಗೊಳಿಸಿದ ಮೇಲೆ ಹೊಸ ತಾಲೂಕು, ಕೇಂದ್ರ ಹೋಬಳಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಬಸವರಾಜ ರಾಯರಡ್ಡಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು ದಶಕಗಳ ಕಾಲ ತಾಲೂಕಿನ ಹಿರೇವಡ್ರಕಲ್ ರೈತರ ಪಹಣಿಗಳ ಸಮಸ್ಯೆ ಇತ್ಯರ್ಥಗೊಳಿಸುವ ಮಾತು ಕೊಟ್ಟಂತೆ ನಡೆದುಕೊಂಡ ತೃಪ್ತಿ ನನಗಿದೆ. ತಾಲೂಕಿನಲ್ಲಿ ಒಟ್ಟು ೧೫ ಬಸ್ ನಿಲ್ದಾಣ ನಿರ್ಮಾಣಕ್ಕೆ ₹ ೫೦ ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ, ತಾಲೂಕಿನಲ್ಲಿ ಅಭಿವೃದ್ಧಿ ಯುಗಪರ್ವ ಪ್ರಾರಂಭವಾಗಲಿದೆ ಎಂದರು.ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ, ಭೂದಾಖಲೆಗಳ ಆಯುಕ್ತ ಜೆ. ಮಂಜುನಾಥ, ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋಧಾ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಜಂಟಿ ನಿರ್ದೇಶಕ ಪ್ರಕಾಶ, ದೇವರಾಜ, ಮಹೇಶ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ರಾಘವೇಂದ್ರಚಾರ್ಯ ಜೋಶಿ, ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಬಿ.ಎಂ. ಶಿರೂರ, ಹನುಮಂತಗೌಡ ಪಾಟೀಲ, ಮಾನಪ್ಪ ಪೂಜಾರ, ಮಹೇಶ ಹಳ್ಳಿ ಮತ್ತಿತರರು ಇದ್ದರು.