ದೇಶದ 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವ ಕೃಷಿ ಕ್ಷೇತ್ರದಲ್ಲಿ ಇನ್ನು ಮುಂದೆ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ಹಾಗೂ ಆಹಾರ ಸಂಸ್ಕರಣೆಗೆ ಆದ್ಯತೆ ನೀಡಬೇಕು.

ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ । ರೈತರು ಉತ್ಪಾದನೆಯಿಂದ ರಫ್ತಿನವರೆಗೆ ಪಾಲುದಾರರಾಗಲಿಕನ್ನಡಪ್ರಭ ವಾರ್ತೆ ಗದಗ

ದೇಶದ 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವ ಕೃಷಿ ಕ್ಷೇತ್ರದಲ್ಲಿ ಇನ್ನು ಮುಂದೆ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ಹಾಗೂ ಆಹಾರ ಸಂಸ್ಕರಣೆಗೆ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಈಶ್ವರ ಬಿ. ಖಂಡ್ರೆ ಹೇಳಿದರು.

ಶನಿವಾರ ಸಂಜೆ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಿಲ್ಪಾರ್) ಸಂಯುಕ್ತ ಆಶ್ರಯದಲ್ಲಿ ವಿವಿ ಆವರಣದಲ್ಲಿರುವ ಗ್ರಾಮ ಗಂಗೋತ್ರಿ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆಯ ಕಾನೂನು ವ್ಯವಸ್ಥೆ, ದೃಷ್ಟಿಕೋನಗಳು ಮತ್ತು ಸವಾಲುಗಳು ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿಯಿಂದ ಭಾರತ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಈಗ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಮೂಲಕ ರೈತರ ಆದಾಯ ಹೆಚ್ಚಿಸಬೇಕಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ನೀಡುವ, ಕೀಟಬಾಧೆ ತಡೆಯುವ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕು. ಕೊಯ್ಲಿನ ನಂತರ ಧಾನ್ಯಗಳು ಹಾಳಾಗದಂತೆ ಸಂರಕ್ಷಿಸುವ ತಂತ್ರಜ್ಞಾನ ಕೈಗೆಟುಕುವ ದರದಲ್ಲಿ ಸಿಗಬೇಕು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರ ₹16 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, 15 ಸಾವಿರ ಕಿಮೀ ರಸ್ತೆ ಸುಧಾರಣೆಯಿಂದ ಕೃಷಿ ಉತ್ಪನ್ನಗಳ ಸಾಗಾಟ ಸುಲಭವಾಗಲಿದೆ ಎಂದರು.

ಗದಗ ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಕೃಷಿ ಆಧಾರಿತ ಉದ್ಯಮ ಹಾಗೂ ಉದ್ಯೋಗ ಸೃಷ್ಟಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಡಾ. ಸುರೇಶ ವಿ. ನಾಡಗೌಡರ, ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಸರಳ ನಿಯಂತ್ರಣಾತ್ಮಕ ಪ್ರಕ್ರಿಯೆ ಮತ್ತು ಅನುಕೂಲಕರ ಕಾನೂನು ಚೌಕಟ್ಟು ಅಗತ್ಯವಿದೆ ಎಂದರು. ಸಂಕಿರಣದಲ್ಲಿ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಅಧ್ಯಕ್ಷ ಅಶೋಕ ದಳವಾಯಿ ದಿಕ್ಸೂಚಿ ಭಾಷಣ ಮಾಡಿದರು. ಪ್ರೊ. ಡಾ. ಚಂದ್ರಶೇಖರ ಎಂ. ಬಿರಾದಾರ, ಡಾ. ಎಚ್.ಬಿ. ಬಬಲಾದ, ಡಾ. ಸಪ್ನಾ ಎಸ್., ಡಾ. ಎನ್.ಎ. ಚರಂತಿಮಠ, ಪ್ರೊ. ಡಾ. ಅಶೋಕ ಆರ್. ಪಾಟೀಲ ಹಾಗೂ ಸಿಎಫ್‌ ಟಿಆರ್‌ ಐ ಪ್ರತಿನಿಧಿಗಳು ತಾಂತ್ರಿಕ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು. ಜಿಪಂ ಸಿಇಒ ಮುಕುಲ್ ಜೈನ್, ಕಿಲ್ಪಾರ್ ನಿರ್ದೇಶಕ ಪ್ರೊ. ಸಿ.ಎಸ್. ಪಾಟೀಲ, ಕುಲಸಚಿವ ಪ್ರೊ. ಅಮರೇಶ ಯತಗಲ್, ಹಣಕಾಸು ಅಧಿಕಾರಿ ಪ್ರಶಾಂತ್ ಜೆ.ಸಿ. ಉಪಸ್ಥಿತರಿದ್ದರು.