ಸಾರಾಂಶ
ಹುಬ್ಬಳ್ಳಿ:
ಅತ್ಯಾಧುನಿಕ ಸೌಕರ್ಯ ಹೊಂದಿದ ಹುಬ್ಬಳ್ಳಿ-ಪುಣೆ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೊದಲ ಸಂಚಾರ ನಡೆಸಿತು. ಸೋಮವಾರ ಮಧ್ಯರಾತ್ರಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಜನರು ಅದ್ಧೂರಿಯಾಗಿ ಬರಮಾಡಿಕೊಂಡರು.ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಂದೇ ಭಾರತ್ ರೈಲು ಮಧ್ಯರಾತ್ರಿ ಹುಬ್ಬಳ್ಳಿ ರೈಲು ನಿಲ್ದಾಣ ಪ್ರವೇಶ ಮಾಡುತ್ತಿದ್ದಂತೆ ಜನರಲ್ಲಿ ಹರ್ಷದ ಹೊನಲು ಹರಿಯಿತು. ಕೇಕೆ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಎರಡು ಗಂಟೆ ಮುಂಚಿತವಾಗಿಯೇ ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಜನ ಹೊಸ ರೈಲನ್ನು ಕಣ್ತುಂಬಿಕೊಂಡರು. ಹಲವರು ವಂದೇ ಭಾರತ್ ರೈಲಿನ ಎದುರು ಸೆಲ್ಫಿ ತಗೆದುಕೊಂಡರೆ, ಇನ್ನು ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು.
ಪ್ರಧಾನಿ ಮೋದಿ ಚಾಲನೆ:ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಚಾಲನೆ ನೀಡಿದರು. ಬೆಳಗಾವಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಬರಮಾಡಿಕೊಂಡರೆ, ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಸ್ವಾಗತಿಸಿದರು. ಸೆ. 18ರಂದು ರೈಲು ಹುಬ್ಬಳ್ಳಿಯಿಂದ ಮತ್ತು ಸೆ. 19 ರಂದು ಪುಣೆಯಿಂದ ಮೊದಲ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ. ರೈಲಿನಲ್ಲಿ 8 ಬೋಗಿಗಳಿದ್ದು, ಅದರಲ್ಲಿ ಎಕ್ಸಿಕ್ಯೂಟಿವ್ ಕ್ಲಾಸ್‌ನ 52 ಆಸನಗಳು ಮತ್ತು 478 ಚೇರ್ ಕಾರ್ (ಸಿಸಿ) ಆಸನಗಳಿವೆ.
ಪ್ರಯಾಣ ದರ:ಹುಬ್ಬಳ್ಳಿಯಿಂದ ಧಾರವಾಡ ವರೆಗಿನ ಚೇರ್ ಕಾರ್ (ಸಿಸಿ) ಪ್ರಯಾಣಕ್ಕೆ ₹365, ಎಕ್ಸಿಕ್ಯೂಟಿವ್ ಕ್ಲಾಸ್ (ಇಸಿ) ಪ್ರಯಾಣಕ್ಕೆ ₹690 ದರ ನಿಗದಿಗೊಳಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಕ್ಯಾಟರಿಂಗ್ ಸೇರಿ ಚೇರ್ ಕಾರ್ ಪ್ರಯಾಣಕ್ಕೆ ₹520, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹1,005 ಮತ್ತು ಕ್ಯಾಟರಿಂಗ್ ಇಲ್ಲದೆ ಚೇರ್ ಕಾರ್‌ಗೆ ₹505, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹990 ದರವಿದೆ. ಹುಬ್ಬಳ್ಳಿಯಿಂದ ಪುಣೆಗೆ ಕ್ಯಾಟರಿಂಗ್ ಶುಲ್ಕ ಸೇರಿ ಚೇರ್ ಕಾರ್ ಪ್ರಯಾಣಕ್ಕೆ ₹1,530, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹2,780 ದರ ನಿಗದಿಪಡಿಸಲಾಗಿದೆ.