ಸಾರಾಂಶ
ಬ್ಯಾಡಗಿ: ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ 122 ಕೋಟಿ ರು. ವೆಚ್ಚದಲ್ಲಿ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ಪೈಪ್‌ಲೈನ್ ಮೂಲಕ ಒಟ್ಟು 147 ಕೆರೆಗಳನ್ನು ತುಂಬಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ತಾಲೂಕಿನ ರೈತರಿಗೆ ನೀರು ಹರಿಸುವ ಬ್ಯಾತನಾಳ ಗ್ರಾಮದ (ಹಾನಗಲ್ಲ ತಾಲೂಕು) ಬಳಿಯಿರುವ ಜಾಕವೆಲ್‌ನಲ್ಲಿ ಗುಂಡಿ ಒತ್ತುವ ಮೂಲಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರೈತರು ಕಂಗಾಲಾಗಿದ್ದಾರೆ:ಪ್ರಸಕ್ತ ಮುಂಗಾರಿನಲ್ಲಿ ಹದವರ್ತಿ ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ, ಇರುವಷ್ಟು ಹಸಿಯಲ್ಲೇ ಧೈರ್ಯದಿಂದ ಬಿತ್ತನೆ ಮಾಡಿದ್ದಾರೆ, ನೀರು ಹರಿಸಿದಲ್ಲಿ ಬಿತ್ತನೆ ಮಾಡಿದ ಅಷ್ಟಿಷ್ಟು ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವೆನ್ನುವುದು ಅಭಿಪ್ರಾಯವಾಗಿದೆ, ಆದರೆ ಸದರಿ ವರ್ಷವೂ ಕೇವಲ ಕೆರೆಗಳನ್ನಷ್ಟೇ ತುಂಬಿಸಲು ಸಾಧ್ಯವೆಂಬುದು ನೀರಾವರಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ ಎಂದರು.
1 ಟಿಎಂಸಿ ನೀರು: ಮುಂಗಾರು ಮಳೆ ಕೈಕೊಟ್ಟ ವೇಳೆಯಲ್ಲಿ ಬೆಳೆ ಉಳಿಸಿಕೊಳ್ಳಲೆಂದೆ ಕೋಟಿಗಟ್ಟಲೇ ಅನುದಾನ ವ್ಯಯಿಸಿ ಗುಡ್ಡದಮಲ್ಲಾಪುರ ಏತ ನೀರಾವರಿ (ಅಲ್ಪಾವಧಿ ನೀರಾವರಿ) ಯೋಜನೆ ಸಿದ್ಧಪಡಿಸಲಾಗಿದೆ, ಯೋಜನೆಯಡಿ ವರದಾ ನದಿಯಿಂದ 1 ಟಿಎಂಸಿ ನೀರು ಎತ್ತುವ ಮೂಲಕ ಬ್ಯಾಡಗಿ ತಾಲೂಕಿನ 22 ಗ್ರಾಮಗಳ 5261 ಹೆಕ್ಟೇರ್ (13 ಸಾವಿರ ಎಕರೆ) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶವಿತ್ತು ಎಂದರು.ಬದಲಾದ ಯೋಜನೆಯ ಉದ್ದೇಶ:ಕಾಲುವೆಗಳ ಮೂಲಕ ನೀರು ಹರಿಸುವ ನಿಟ್ಟಿನಲ್ಲಿ ಕಳೆದೊಂದು ದಶಕದಿಂದ ಪ್ರಯತ್ನಿಸಿದರೂ ಸಾಕಾರಗೊಂಡಿಲ್ಲ, ಹೀಗಾಗಿ ಸದರಿ ಉದ್ದೇಶವನ್ನು ಕೈಬಿಡಲಾಗಿದ್ದು, 122 ಕೋಟಿ ರು. ವ್ಯಯಿಸಿ ಪೈಪಲೈನ್ ಮೂಲಕ 147 ಕೆರೆಗಳನ್ನು ತುಂಬಿಸುವುದರ ಜೊತೆಗೆ ವರದಾ ನದಿಗೆ ಅಡ್ಡಲಾಗಿ ಬ್ಯಾತನಾಳದ ಬಳಿ ಬ್ಯಾರೇಜ್ ನಿರ್ಮಿಸಲು ಈಗಾಗಲೇ ಡಿಪಿಆರ್ ಸಿದ್ಧವಾಗಿದೆ ಎಂದರು.
ಶೀಘ್ರದಲ್ಲೇ ಸಚಿವ ಸಂಪುಟದ ಒಪ್ಪಿಗೆ: ಪ್ರಸಕ್ತ ವರ್ಷ ಮಳೆಯಿಲ್ಲದೇ ಕಂಗಾಲಾಗಿರುವ ಸಂತ್ರಸ್ತ ರೈತರು ನಮ್ಮ ಜಮೀನುಗಳಿಗೆ ನೀರು ಕೊಡದಿದ್ದರೂ ಪರವಾಗಿಲ್ಲ. ಈಗಾಗಲೇ ಅಳವಡಿಸಿರುವ ಪೈಪಲೈನ್‌ಗಳ ಮೂಲಕ ಕನಿಷ್ಠ ಕೆರೆಗಳನ್ನಾದರೂ ತುಂಬಿಸಲಿ ಇದರಿಂದ ಕೊಳವೆಬಾವಿಗಳ ಮೂಲಕ ಬೆಳೆಯನ್ನಾದರೂ ಉಳಿಸಿಕೊಳ್ಳುತ್ತೇವೆ ಎಂಬ ಅಳಲು ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸದರಿ ನೀರಾವರಿ ಯೋಜನೆ ಜನರಿಗೆ ತಲುಪಿಸದೇ ಬಿಡುವುದಿಲ್ಲ, ಈಗಾಗಲೇ ನೀಲಿನಕ್ಷೆ ಸಿದ್ದವಾಗಿದ್ದು ಅಂತಿಮ ಹಂತವನ್ನು ತಲುಪಿದೆ ಹಣಕಾಸು ಇಲಾಖೆಯು ಕೂಡ ಅನುಮತಿ ನೀಡಿದೆ, ಬರುವ ದಿನಗಳಲ್ಲಿ ಕ್ಯಾಬಿನೆಟ್ ನಲ್ಲಿ ಮಂಜೂರಿ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ರುದ್ರಣ್ಣ ಹೊಂಕಣದ, ವೀರಭದ್ರಪ್ಪ ಗೊಡಚಿ, ಮಂಜನಗೌಡ ಲಿಂಗನೌಡ್ರ, ಪ್ರಭುಗೌಡ ಪಾಟೀಲ, ಜಗದೀಶ ಕಣಗಲಭಾವಿ, ಮಾರುತಿ ಅಚ್ಚಿಗೇರಿ, ಬಂಗಾರೇಶ ಪೂಜಾರ, ವೀರನಗೌಡ ಪಾಟೀಲ, ಲಿಂಗರಾಜ ಕುಮ್ಮೂರ, ಮಹದೇವಪ್ಪ ಓಲೇಕಾರ, ಕೆಂಚಪ್ಪ ದೊಡ್ಮನಿ, ಅಣ್ಣಪ್ಪ ಬಡಮಲ್ಲಿ, ಯುಟಿಪಿ ಎಂಜಿನಿಯರ್ ಇಇ ಬಸವರಾಜ, ಎಇಇ ರುದ್ರಪ್ಪ, ಸುಮಿತ್ರ ನವಲೆ ಇನ್ನಿತರರಿದ್ದರು.