ಬ್ಯಾಡಗಿ ತಾಲೂಕಿನ 137 ಕೆರೆಗಳಿಗೆ ವರದಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾ ರ 115.6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಬ್ಯಾಡಗಿ: ತಾಲೂಕಿನ 137 ಕೆರೆಗಳಿಗೆ ವರದಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾ ರ 115.6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿ ತಾಲೂಕಿನ 137 ಕೆರೆಗಳಿಗೆ ವರದಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಸರಕಾರದಿಂದ ಮಂಜೂರಾತಿ ದೊರೆತಿದ್ದು, ಈ ಮೂಲಕ ತಾಲೂಕಿನ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದಂತಾಗಿದೆ ಎಂದರು.

ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಯೋಜನೆ ಪೂರ್ಣಗೊಂಡ ಬಳಿಕ ತಾಲೂಕಿನ ಹಲವು ಭಾಗಗಳ ನೂರಾರು ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ. ಕೆರೆಗಳು ಭರ್ತಿಯಾಗುವುದರಿಂದ ಅಂತರ್ಜಲಮಟ್ಟವೂ ಗಣನೀಯವಾಗಿ ಹೆಚ್ಚಳವಾಗಲಿದ್ದು, ಕೊಳವೆಬಾವಿ ಹಾಗೂ ಬೋರ್‌ವೆಲ್‌ಗಳ ಮೂಲಕ ಕೃಷಿ ಮಾಡುತ್ತಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆತು ರೈತರ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಿದರು.

ರೈತರ ಮನವಿಗೆ ಸ್ಪಂದನೆ:ಮಲೆನಾಡು ಭಾಗದ ರೈತರು ಕಾಲುವೆ ಮೂಲಕ ನೀರು ಹರಿಸುವ ಬದಲಾಗಿ ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವಂತೆ ಶಾಸಕ ಬಸವರಾಜ ಶಿವಣ್ಣನವರಿಗೆ ಮನವಿ ಮಾಡಿದ್ದರು. ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯಲು ನಿರಂತರವಾಗಿ ಪ್ರಯತ್ನ ನಡೆಸಿದ್ದರು. ಇದರ ಫಲವಾಗಿ ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಮಂಜೂರಾತಿ ದೊರೆತಿದ್ದು, 115.6 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ತಾಲೂಕಿನ ರೈತರ ಬಹುದಿನಗಳ ನಿರೀಕ್ಷೆ ನನಸಾಗುವಂತಾಗಿದೆ ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ಕಾರ್ಯಗಳಿಗೆ ವೇಗ:ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡುತ್ತಿದೆ. ಬ್ಯಾಡಗಿ ಪಟ್ಟಣದ ದಶಕಗಳ ಕನಸಾಗಿರುವ ಮುಖ್ಯ ರಸ್ತೆ ಅಗಲೀಕರಣ ಹಾಗೂ ಯುಜಿಡಿ ಕಾಮಗಾರಿಗಳಿಗೂ ಚಾಲನೆ ದೊರೆತಿದೆ. ಶೀಘ್ರದಲ್ಲೆ ರಸ್ತೆ ಕಾಮಗಾರಿಗೂ ಚಾಲನೆ ದೊರೆಯಲಿದೆ. ಪಟ್ಟಣದ ರಸ್ತೆ, ಒಳಚರಂಡಿ ಹಾಗೂ ಸಂಬಂಧಿತ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಪಟ್ಟಣದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದು ತಿಳಿಸಿದರು.