ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸಂಪತ್ತಿನ ಅಧಿದೇವತೆ, ಬೇಡಿದ ವರವನ್ನು ಕೊಡುತ್ತಾಳೆ ಎಂಬ ನಂಬಿಕೆಯಿಂದ ಆಚರಿಸುವ ವರಮಹಾಲಕ್ಷಿ ಹಬ್ಬವನ್ನು ಬೆಲೆ ಏರಿಕೆಯ ನಡುವೆಯೂ ಶುಕ್ರವಾರ ಜಿಲ್ಲೆಯಾದ್ಯಂತ ಮಹಿಳೆಯರು ಮನೆ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಗುರುವಾರ ರಾತ್ರಿಯೇ ಮನೆ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ವಿವಿಧ ಹೂಗಳು, ವಿದ್ಯುತ್ ದ್ವೀಪಗಳಿಂದ ಅಲಂಕರಿಸಿದರು, ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿ ಬಾಳೆ ಕಂದು ಮಾವಿನ ಎಲೆಗಳಿಂದ ತೋರಣವನ್ನು ಕಟ್ಟಿ ಪೂಜಾ ಮನೆಯನ್ನು ಅಲಂಕರಿಸಿದ್ದರು, ಮೊದಲಿಗೆ ರಂಗೋಲಿ ಬಿಡಿಸಿ, ಅದರ ಮೇಲೆ ಬಾಳೆಎಲೆ ಇರಿಸಿ. ಬಳಿಕ ಬಾಳೆಎಲೆ ಮೇಲೆ ಅಕ್ಕಿಯನ್ನು ಹರಡಿ ಕಲಶ ಸ್ಥಾಪಿಸಿ. ಬಟ್ಟಲಿಗೆ ಅರಿಶಿನ-ಕುಂಕುಮವನ್ನು ಸಿಂಪಡಿಸಿ ಮತ್ತು ಅದರ ಮೇಲೆ ಲಕ್ಷ್ಮೀ ಸ್ವರೂಪವಾದ ತೆಂಗಿನಕಾಯಿಯನ್ನು ಇಟ್ಟು ಪೂಜಿಸಿ, ಅದಕ್ಕೆ ಲಕ್ಷ್ಮೀ ಮುಖವಾಡ ಹಾಕಿ ಸೀರೆ ಮತ್ತು ಚಿನ್ನಾಭರಣಗಳಿಂದ ಲಕ್ಷ್ಮೀಯನ್ನು ಅಲಂಕರಿಸಿದ್ದರು. ದೇವರ ಮುಂಭಾಗ ಹಣ ಮತ್ತು ಚಿನ್ನವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ, ವರಮಹಾಲಕ್ಷ್ಮಿ ವ್ರತ ಪಠಿಸಿದರು. ಮಹಾಮಂಗಳಾರತಿ ಮಾಡಿ, ವಿವಿಧ ಬಗೆಯ ತಿಂಡಿಗಳನ್ನು ಒಟ್ಟು ನೈವೇದ್ಯ ನೆರವೇರಿಸಿದರು. ಅಕ್ಕಪಕ್ಕದ ಮನೆಗಳಲ್ಲಿರುವ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ನೀಡಿ ಆಶೀರ್ವಾದ ಪಡೆದರು, ಕೆಲವರು ಬಾಗಿನವನ್ನು ಅರ್ಪಿಸಿದರು.ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.ಆದ್ದರಿಂದ ವರಮಹಾಲಕ್ಷ್ಮಿ ಪೂಜೆಯ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಪೂಜಿಸಲು ಬಹಳ ಮುಖ್ಯವಾದ ದಿನವೆಂದು ಪರಿಗಣಿಸಲಾಗಿದೆ. ಕೆಲವರು ಪೂಜೆ ನೆರವೇರಿಸಿದ ನಂತರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.