ಸಾರಾಂಶ
ಹಾವೇರಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಮಂಟಪ ನಿರ್ಮಿಸಿ, ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಅಲಂಕಾರ ಮಾಡಿ, ವರಮಹಾಲಕ್ಷ್ಮಿಯ ಮುಂದೆ ಚಿನ್ನ ಹಾಗೂ ಹಣವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.ಗೃಹಿಣಿಯರು ವರಮಹಾಲಕ್ಷ್ಮಿಯ ವಿಗ್ರಹಕ್ಕೆ ಹೊಸ ರೇಷ್ಮೆ ಸೀರೆ ಉಡಿಸಿ, ಬಳಿಕ ತಮ್ಮ ಮನೆಯಲ್ಲಿದ್ದ ವಿವಿಧ ಬಗೆಯ ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಕರೆದು ವಿಶೇಷ ಪೂಜೆ ಮಾಡಿಸಿ, ಅರಿಶಿನ, ಕುಂಕುಮ ನೀಡಿ ಬಾಗಿನ ಅರ್ಪಿಸಿದರು. ಇನ್ನು ಕೆಲವರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮುತ್ತೈದೆಯರು ತಮ್ಮ ತಮ್ಮ ಮನೆಗಳಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಯುವತಿಯರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮ ಅಕ್ಕಪಕ್ಕದ ಮನೆಗಳಿಗೆ ಕುಂಕಮ ತೆಗೆದುಕೊಳ್ಳಲು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಮಾರುಕಟ್ಟೆಯಲ್ಲಿ ಹಬ್ಬದ ವಿಶೇಷವಾಗಿ ದಾಳಿಂಬೆ, ಸೇಬು, ದ್ರಾಕ್ಷಿ, ಮೊಸಂಬೆ, ಬಾಳೆಹಣ್ಣುಗಳ ಹಾಗೂ ಹೂವುಗಳ ಬೆಲೆ ಗಗನಕ್ಕೇರಿದರೂ ಕೇಳಿದಷ್ಟು ಹಣ ನೀಡಿ ಖರೀದಿಸಿ, ಹಬ್ಬ ಆಚರಿಸಲಾಯಿತು.