ಫರಂಗಿಪೇಟೆಯಲ್ಲಿ ಬಸ್‌ ಪಲ್ಟಿ: ೨೦ ಮಂದಿಗೆ ಗಾಯ

| Published : Aug 17 2024, 12:50 AM IST

ಸಾರಾಂಶ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ ೨೦ ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಫರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ ೨೦ ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಫರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಈ ಕುರಿತಾಗಿ ಪ್ರಯಾಣಿಕೆ ರಮ್ಲಾನ್ ಖತೀಜಾ ಸುಲ್ತಾನ್ ಎಂಬವರು, ಬಸ್ ಚಾಲಕ ರಮೀಜ್ ವಿರುದ್ಧ ದೂರು ನೀಡಿದ್ದು, ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಈ ಅವಘಡ ಸಂಭವಿಸಿದ್ದು, ತನ್ನ ಜೊತೆ ಸಹಪ್ರಯಾಣಿಕರಿಗೂ ಗಾಯಗಳಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ. ಚಾಲಕನ ಅತಿ ವೇಗದ ಚಾಲನೆ ಅಥವಾ ವಾಹನದಲ್ಲಿ ಕಂಡ ತಾಂತ್ರಿಕ ದೋಷಗಳಿಂದ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಯುವಕರು ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.ಡಿಜಿಟಲ್ ಅರೆಸ್ಟ್ ಮಾಡಿ ಹಣ ಸುಲಿಗೆ:

ಡ್ರಗ್ಸ್ ಕೇಸ್ ದಾಖಲಿಸುವುದಾಗಿ ಹೆದರಿಸಿ ಸಾರ್ವಜನಿಕರನ್ನು ‘ಡಿಜಿಟಲ್ ಅರೆಸ್ಟ್‌’ಗೆ ಒಳಪಡಿಸಿ ಸುಲಿಗೆ ಮಾಡುತ್ತಿದ್ದ ದುಬೈ ಮೂಲದ ಸೈಬರ್ ವಂಚನೆ ಜಾಲದ ಐವರು ದುಷ್ಕರ್ಮಿಗಳು ಸಿಐಡಿ ಸೈಬರ್ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಡಿ.ಜೆ.ಹಳ್ಳಿಯ ಮೊಹಮ್ಮದ್ ಶಾಕೀಬ್‌, ಮೊಹಮ್ಮದ್ ಅಯಾನ್, ಅಹ್ಸಾನ್‌ ಅನ್ಸಾರಿ, ಸಲ್ಮಾನ್‌ ರಾಜ ಹಾಗೂ ದುಬೈನ ಯೂಸೇಫ್ ಶೇಠ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹1.7 ಕೋಟಿ ನಗದು ಹಾಗೂ 7,700 ಯುಎಸ್ ಡಾಲರ್‌ಗಳ ನೋಟುಗಳು ಹಾಗೂ ವಂಚನೆ ಹಣದಲ್ಲಿ ಖರೀದಿಸಿದ್ದ ಬೆಂಜ್‌ ಕಾರನ್ನು ಜಪ್ತಿ ಮಾಡಲಾಗಿದೆ. ಈ ಸೈಬರ್ ಜಾಲದ ಕಿಂಗ್‌ಪಿನ್‌ಗಳಾದ ದುಬೈನಲ್ಲಿರುವ ನದೀಮ್ ಹಾಗೂ ಶಾಹೀಬ್‌ ಬಾನು ಪತ್ತೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆಸಿದೆ.ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯ ಕಾಫಿ ಎಸ್ಟೇಟ್ ಮಾಲೀಕರೊಬ್ಬರಿಗೆ ಡ್ರಗ್ಸ್ ಕೇಸ್‌ ಹೆಸರಿನಲ್ಲಿ ಬೆದರಿಸಿ ಡಿಜಿಟಲ್ ಬಂಧನಕ್ಕೊಳಪಡಿಸಿ ₹2.71 ಕೋಟಿವನ್ನು ದುಷ್ಕರ್ಮಿಗಳು ವಸೂಲಿ ಮಾಡಿದ್ದರು. ಈ ಬಗ್ಗೆ ಮಡಿಕೇರಿ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಿಐಡಿ ಸೈಬರ್ ವಿಭಾಗದ ಇನ್‌ಸ್ಪೆಕ್ಟರ್‌ ಬಿ.ಸಿ.ಯೋಗೇಶ್ ಕುಮಾರ್ ನೇತೃತ್ವದ ಪಿಐಗಳಾದ ಜಿ.ಗುರುಪ್ರಸಾದ್ ಹಾಗೂ ವಿ.ಜಿ.ಮಂಜುನಾಥ್ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ವಂಚನೆ?:ಜನರಿಗೆ ಫೆಡೆಕ್ಸ್ ಕಂಪನಿಗೆ ನಿಮ್ಮ ಹೆಸರಿನಲ್ಲಿ ಒಂದು ಪಾರ್ಸೆಲ್ ಬಂದಿದೆ. ಆ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವುದರಿಂದ ಆ ಪಾರ್ಸೆಲ್ ಅನ್ನು ಮುಟ್ಟುಗೋಲು ಹಾಕಲಾಗಿದೆ. ಈ ಬಗ್ಗೆ ನೀವು ಕ್ರೈಮ್ ಪೊಲೀಸ್‌ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಅಪರಿಚಿತರು ಫೆಡೆಕ್ಸ್ ಕೊರಿಯರ್ ಕಂಪನಿ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡುತ್ತಿದ್ದರು. ಆನಂತರ ವಾಟ್ಸ್‌ಆ್ಯಪ್‌ ಮೂಲಕ ಜನರಿಗೆ ಕ್ರೈಂ ಬ್ರಾಂಚ್‌ ಸೋಗಿನಲ್ಲಿ ಮಾತನಾಡಿ, ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು.

ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ಡಿಜಿಟಲ್ ಬಂಧನಕ್ಕೊಳಗಾದ ಸಂತ್ರಸ್ತರು ಹಣ ಕೊಡುತ್ತಿದ್ದರು. ಇದೇ ರೀತಿ ಡ್ರಗ್ಸ್‌ ಕೇಸ್ ನೆಪದಲ್ಲಿ ಮಡಿಕೇರಿ ಜಿಲ್ಲೆಯ ಕಾಫಿ ಎಸ್ಟೇಟ್ ಮಾಲಿಕನನ್ನು ಡಿಜಿಟಲ್ ಬಂಧನಕ್ಕೊಳಪಡಿಸಿ ₹2.21 ಕೋಟಿಯನ್ನು ಆರ್‌ಟಿಜಿಎಸ್ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.ಬಾಕ್ಸ್...ಸಿಐಡಿಗೆ ಕೇಸ್ ವರ್ಗಾವಣೆ

ಈ ಹಣ ವಸೂಲಿ ಬಳಿಕ ಮತ್ತೆ ಎಸ್ಟೇಟ್ ಮಾಲೀಕನಿಗೆ ಸೈಬರ್ ವಂಚಕರ ಕಾಟ ಶುರುವಾಗಿದೆ. ಈ ಕರೆಗಳ ಬಗ್ಗೆ ಸಂಶಯಗೊಂಡ ಅವರು, ಮಡಿಕೇರಿ ಸಿಇಎನ್‌ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದರು. ತಮಗೆ ಫೆಡೆಕ್ಸ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಹಣ ಪಡೆದಿರುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.ರಾಜ್ಯದಲ್ಲಿ ₹2 ಕೋಟಿಗೂ ಮಿಗಿಲಾದ ಸೈಬರ್ ವಂಚನೆ ಕೃತ್ಯಗಳನ್ನು ಸಿಐಡಿ ಸೈಬರ್ ವಿಭಾಗ ತನಿಖೆ ನಡೆಸಲಿದೆ. ಅಂತೆಯೇ ಮಡಿಕೇರಿ ಪ್ರಕರಣವನ್ನು ಸಿಐಡಿ ಎಸ್ಪಿ ಅನೂಪ್‌ ಶೆಟ್ಟಿ ಸಾರಥ್ಯದ ಸೈಬರ್ ವಿಭಾಗಕ್ಕೆ ತನಿಖೆಗೆ ಹಸ್ತಾಂತರವಾಯಿತು. ಈ ಬಗ್ಗೆ ಯೋಗೇಶ್ ನೇತೃತ್ವದಲ್ಲಿ ಎಸ್ಪಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿಸಿದರು.