ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಇಡೀ ಚಿತ್ರದುರ್ಗ ನಗರವು ರಿಪೇರಿ ಮಾಡಲಾಗದಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ. ಹಿಂದಿನ ಶಾಸಕ ಮಹಾಶಯರು ಅಂತಹ ಕೊಡುಗೆ ನೀಡಿದ್ದಾರೆ. ಆದ್ದರಿಂದ ಕೆಡಿಸಿರುವ ದುರ್ಗವ ಮೊದಲು ಸರಿ ಮಾಡುವಂತೆ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯವರಲ್ಲಿ ವಿನಂತಿಸಿದರು.ಕೆಳಗೋಟೆಯಲ್ಲಿರುವ ಬೇಡರಕಣ್ಣಪ್ಪ ದೇವಸ್ಥಾನದ ಪಕ್ಕದಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಗರಸಭೆ, ಜಿಲ್ಲಾಡಳಿತ ಮತ್ತು ಜನ ಸಮೂಹವೇ ತಮ್ಮ ಬೆಂಬಲಕ್ಕಿದೆ. ಲಭ್ಯವಾಗುವ ಎಲ್ಲ ಅವಕಾಶ ಹಾಗೂ ಅನುದಾನವ ಬಳಸಿ ದುರ್ಗವ ರಿಪೇರಿ ಮಾಡಿ. ಚಿತ್ರದುರ್ಗ ಶಾಸಕರನ್ನು ಬದಲಾವಣೆ ಮಾಡಬೇಕೆಂದು ತೀರ್ಮಾನಿಸಿ ಎಲ್ಲಾ ಜಾತಿ ವರ್ಗದವರು ಒಟ್ಟಾಗಿ ನಿಮ್ಮನ್ನು ಗೆಲ್ಲಿಸಿದ್ದಾರೆ ಎಂದರು.ನಗರದ ಬಹುತೇಕ ಕಡೆ ಒಳಚರಂಡಿ ವ್ಯವಸ್ಥೆ ಇದ್ದು, ಅವುಗಳಿಗೆ ಸೂಕ್ತ ಸಂಪರ್ಕ ಇಲ್ಲ. ಎಲ್ಲಾ ಕಡೆ ಯುಜಿಡಿ ಚೇಂಬರ್ ಗಳು ತುಂಬಿ ತುಳುಕಾಡಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಮೂಗು ಮುಚ್ಚಿಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಎಲ್ಲ ಕಡೆ ಸಿಸಿ ರಸ್ತೆಗಳಿವೆ. ಆದರೆ ಎಲ್ಲೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಅವಕಾಶವೇ ಇಲ್ಲದಂತಾಗಿದೆ. ಇಂಜಿನಿಯರ್ ಗಳು ಅದ್ಹೇಗೆ ಇಂತಹ ಕೆಟ್ಟ ವ್ಯವಸ್ಥೆ ಸೃಷ್ಠಿಸಿದರೋ ಅಚ್ಚರಿಯಾಗುತ್ತಿದೆ ಎಂದು ಮಂಜುನಾಥ್ ಹೇಳಿದರು.ಭೀಮಪ್ಪನಾಯಕ ಚಿತ್ರದುರ್ಗ ನಗರಸಭೆ ಅಧ್ಯಕ್ಷರಾಗಿದ್ದಾಗ ಊರು ಕಟ್ಟೋಣ ಜಮೀನು ಕೊಡಿ ಎಂದು ಕೇಳಿದ್ದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ನಾಲ್ಕುನೂರು, ಐದು ನೂರು ರು.ಗೆ ಎಕರೆಯಂತೆ ಭೂಮಿ ನೀಡಿ ಇಂದು ಅನಾಥರಾಗಿದ್ದಾರೆ. ಈಗ ಇದೇ ಸಮುದಾಯದ ಜನರಿಗೆ ಹಕ್ಕು ಪತ್ರ ಕೊಡುವ ಕೆಲಸವಾಗುತ್ತಿರುವುದು ನೋವಿನ ಸಂಗತಿ ಎಂದರು.ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಹತ್ತು ಮಂದಿಯಿರುವ ಸ್ತ್ರೀಶಕ್ತಿ ಸಂಘಕ್ಕೆ ಎರಡುವರೆ ಲಕ್ಷ ರು. ನೆರವು ನೀಡುವ ಅವಕಾಶವಿದೆ. ನೇರ ಸಾಲ ಕೊಡಬಹುದು. ಜಮೀನು ಇದ್ದವರಿಗೆ ಬೋರ್ ವೆಲ್ ಕೊರೆಸಿ ಕೊಡೋಣ. ಚಿಕ್ಕ ವಯಸ್ಸಿನಲ್ಲಿ ಶಾಸಕರಾಗಿರುವ ಕೆ.ಸಿ. ವೀರೇಂದ್ರಪಪ್ಪಿಯವರಿಗೆ ರಾಜಕೀಯದಲ್ಲಿ ಒಳ್ಳೆ ಭವಿಷ್ಯವಿದೆ. ಲಿಂಗಾಯಿತ ಮತಗಳನ್ನು ಕಾಂಗ್ರೆಸ್‍ಗೆ ತರುವ ಶಕ್ತಿ ಅವರಲ್ಲಿದೆ ಎಂದು ಮಂಜುನಾಥ್ ಹೇಳಿದರು. ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಸ್ಲಂ ಬೋರ್ಡ್‍ಗೆ ಸಿ.ಕೆ.ಪುರದಿಂದ 48 ಮಂದಿ ಆಯ್ಕೆಯಾಗಿದ್ದಾರೆ. ಜನರು ದೇವಸ್ಥಾನ ಕೇಳುವುದನ್ನು ನಿಲ್ಲಿಸಬೇಕು. ಬದಲಾಗಿ ಗ್ರಂಥಾಲಯಗಳನ್ನು ತೆರೆದರೆ ಮಕ್ಕಳ ಜ್ಞಾನ ಹೆಚ್ಚುತ್ತದೆ. ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಬದಲು ಗ್ರಂಥಾಲಯಕ್ಕೆ ಒಂದು ಪುಸ್ತಕ ಕೊಡಿ ಎಂದು ಸಿ.ಕೆ ಪುರ ನಿವಾಸಿಗಳಲ್ಲಿ ವಿನಂತಿಸಿದರು.ನಗರಸಭೆ ಪೌರಾಯುಕ್ತೆ ರೇಣುಕ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಚ್. ಅಂಜಿನಪ್ಪ, ನಗರಸಭೆ ಮಾಜಿ ಸದಸ್ಯರಾದ ಪ್ರಕಾಶ್, ತಿಪ್ಪೇಸ್ವಾಮಿ, ಅಂಗಡಿ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಕಾಶ್, ತುಮಕೂರು ನಗರಸಭೆ ಸದಸ್ಯ ಅಬ್ದುಲ್, ಕೆಡಿಪಿ ಸದಸ್ಯ ಕೆ.ಬಿ. ನಾಗರಾಜ್, ವಿಜಯಣ್ಣ, ಸುಧಾಕರ್, ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ವೇದಿಕೆಯಲ್ಲಿದ್ದರು.