ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತವು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿತು.ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಶುಕ್ರವಾರ ಬೆಳೆಗ್ಗೆ 9:30 ಕ್ಕೆ ಆರಂಭವಾದ ಕನ್ನಡ ಜ್ಯೋತಿ ರಥಯಾತ್ರೆಗೆ ಕನ್ನಡಪರ ಸಂಘಟನೆಗಳ ಧುರೀಣರು, ತಾಲೂಕು ಆಡಳಿತ, ವಿವಿಧ ಕಲಾತಂಡಗಳ ಮದ್ದಳೆ, ನಗಾರಿ ತಾಳ ಮೇಳಗಳೊಡನೆ ಕನಕಪುರದ ಎಂಜಿ ರಸ್ತೆಯ ಮೂಲಕ ಜಯಘೋಷಗಳೊಡನೆ ಸಾಗಿತು,
ತಹಸೀಲ್ದಾರ್ ಸ್ಮಿತಾರಾಮು ಮಾತನಾಡಿ, ಕರ್ನಾಟಕ ಏಕೀಕರಣಗೊಂಡ ಸುವರ್ಣ ಮಹೋತ್ಸವ ಕನಕಪುರ ತಾಲೂಕಿಗೆ ಬಂದದ್ದು ಸಂತಸವಾಗಿದೆ. ಕನ್ನಡಿಗರು ಒಟ್ಟುಗೂಡಿ ಕನ್ನಡ ಸಂಸ್ಕೃತಿ ಪರಂಪರೆಯನ್ನು ಪಾಲಿಸಿಕೊಂಡು ಬರಲು ಸಾಧ್ಯವಾದುದರಿಂದ ನಮ್ಮ ಸಂಸ್ಕೃತಿ ಮತ್ತಷ್ಟು ಶ್ರೀಮಂತಗೊಂಡಿದೆ ಎಂದರು.ಮುಖ್ಯ ಶಿಕ್ಷಕ ಮಾಧವರಾವ್ ಮಾತನಾಡಿ, ಕನ್ನಡ ಇತಿಹಾಸವು ಇಡೀ ಭಾರತದ ಇತಿಹಾಸದಲ್ಲೆ ಅತ್ಯಂತ ವಿಶಿಷ್ಟ ಪ್ರಾಯವಾಗಿದ್ದು, ಹಲವು ಮಹನೀಯರ ಪರಿಶ್ರಮದ ಪ್ರತಿಫಲವಾಗಿ 1956 ನ.೦1 ರಂದು ಏಕೀಕರಣವಾಯಿತು, ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಭಾರತದಲ್ಲೇ ಮೊದಲ ಸಂಸ್ಥಾನವಾಗಿ ಮೈಸೂರನ್ನು ಬಿಟ್ಟು ಕೊಟ್ಟರು. ಅವರನ್ನು ನಾವು ಪ್ರಾಥ ಸ್ಮರಣೆ ಮಾಡಬೇಕಿದೆ ಎಂದರು.
ಅವರ ತ್ಯಾಗವೇ ಒಕ್ಕೂಟಕ್ಕೆ ಮುನ್ನುಡಿ ಬರೆಯಿತು. ಆದರೂ ಮೈಸೂರು ರಾಜ್ಯವೆಂಬ ಹೆಸರಿಗಿಂತ ಹಲವಾರು ಕವಿ , ಪುಂಗವರು ಹಲವಾರು ಕಾವ್ಯಗಳಲ್ಲಿ ಜನಪ್ರಿಯಗೊಳಿ ಸಿದ್ದ ಕರ್ನಾಟಕ ಎಂಬ ಹೆಸರಿನತ್ತ ಅತಿ ಹೆಚ್ಚು ಒಲವು ಹೊಂದಿದ್ದರು. ಅದರ ಫಲವಾಗಿ 50 ವರ್ಷಗಳ ಹಿಂದೆ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಲಾಯಿತು. ಆ ಸಂಭ್ರಮವನ್ನು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ರವರು ಹಂಪಿಯ ವಿರೂಪಾಕ್ಷ ಮಂದಿರದಲ್ಲಿ ಪೂಜೆ ಸಲ್ಲಿಸಿ ಆಚರಿಸಿದ್ದರು ಎಂದರು.ತಾಪಂ ಇಒ ಭೈರಪ್ಪ, ನಗರಸಭೆ ಆಯುಕ್ತ ಮಹದೇವ್, ಜಯಪ್ರಕಾಶ್, ಶಿವಕುಮಾರ್, ಜಗದೀಶ್, ಸ್ವರೂಪ, ಸತೀಶ್, ಶಿವಲಿಂಗೇಗೌಡ, ಶಿವನಹಳ್ಳಿ ಶಿವಲಿಂಗಯ್ಯ, ಹೊಂಬಾಳೆಗೌಡ , ಕಬ್ಬಾಳೇಗೌಡ. ಚೀಲೂರು ಮುನಿರಾಜು, ಸ್ಟುಡಿಯೋ ಚಂದ್ರು, ಪ್ರಶಾಂತ್ ಹೊಸದುರ್ಗ, ಜಯರಾಮು, ಕನ್ನಡ ಭಾಸ್ಕರ್, ಅಂಗಡಿ ರಮೇಶ್, ವೀರೇಶ್, ಕಾಡೇಗೌಡ, ನೀಲಿ ರಮೇಶ್,ಪುಟ್ಟಲಿಂಗಯ್ಯ, ಅಸ್ಗರ್, ಅಪ್ಪಾಜಿ, ದುರ್ಗೇಶ್,ಮಿಲ್ಟ್ರಿ ರಾಮಣ್ಣ, ಶ್ರೀನಿವಾಸ್ ಭಾಗವಹಿಸಿದ್ದರು.