ದೊಡ್ಡಬಳ್ಳಾಪುರದೆಲ್ಲೆಡೆ ಸಂಭ್ರಮದ ವರಮಹಾಲಕ್ಷ್ಮೀ ವ್ರತಾಚರಣೆ

| Published : Aug 09 2025, 12:00 AM IST

ದೊಡ್ಡಬಳ್ಳಾಪುರದೆಲ್ಲೆಡೆ ಸಂಭ್ರಮದ ವರಮಹಾಲಕ್ಷ್ಮೀ ವ್ರತಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋಡ ಮುಸುಕಿದ ವಾತಾವರಣದ ನಡುವೆಯೂ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವಾದ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪ್ರದೇಶದ ಮನೆಮನೆಗಳಲ್ಲೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮುಖ್ಯವಾಗಿ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ ಲಕ್ಷ್ಮೀ ಹಬ್ಬವನ್ನು ಮಹಿಳೆಯರು ಅರ್ಥಪೂರ್ಣವಾಗಿ ಆಚರಿಸಿದರು.ಹಬ್ಬದ ಅಂಗವಾಗಿ ಇಲ್ಲಿನ ಕನಕದಾಸರಸ್ತೆ (ಚೈತನ್ಯನಗರ)ದಲ್ಲಿರುವ ಮಹಾಲಕ್ಷ್ಮಿ ಅಮ್ಮನವರ ದೇವಾಲಯ, ಶಾಂತಿನಗರದಲ್ಲಿರುವ ನಗರದೇವತೆ ಮುತ್ಯಾಲಮ್ಮ ದೇವಿ ದೇವಾಲಯದಲ್ಲಿ ಶ್ರೀಮಾತೆಗೆ ವಿಶೇಷಾಲಂಕಾರ ಮಾಡಲಾಗಿತ್ತು. ಮೋಡ ಮುಸುಕಿದ ವಾತಾವರಣದ ನಡುವೆಯೂ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ವಿವಿಧ ದೇಗುಲಗಳಲ್ಲಿ ಸಂಭ್ರಮ:ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ಕಾಳಿಕಾ ಕಮಟೇಶ್ವರ ದೇವಾಲಯ, ಕರೇನಹಳ್ಳಿ ಬಳಿ ಇರುವ ಅಭಯ ಚೌಡೇಶ್ವರಿ ದೇವಾಲಯ, ಕೊಂಗಾಡಿಯಪ್ಪ ರಸ್ತೆಯಲ್ಲಿರುವ ನಗರೇಶ್ವರ ಸ್ವಾಮಿ ದೇವಾಲಯ, ವೈಕುಂಠ ಜನಾರ್ಧನಸ್ವಾಮಿ ದೇವಾಲಯ, ತೇರಿನ ಬೀದಿಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯ, ಕಚೇರಿ ಪಾಳ್ಯದ ಸಾವಿರಕಣ್ಣಮ್ಮ ದೇವಾಲಯ, ಬೆಸ್ತರಪೇಟೆಯ ಗಂಗಾಪರಮೇಶ್ವರಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮನೆ ಮನೆಗಳಲ್ಲಿ ತರಾವರಿ ಸಂಭ್ರಮ:ಇಲ್ಲಿನ ಮನೆ ಮನೆಗಳಲ್ಲಿ ಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಯಿತು. ಮುಖ್ಯವಾಗಿ ಕಳಶ, ತೆಂಗಿನಕಾಯಿಯನ್ನು ಅಲಂಕರಿಸಿ ಮಹಾಲಲಕ್ಷ್ಮೀ ಮುಖವಾಡ ಪ್ರತಿಷ್ಠಾಪಿಸಿ ವಿಧ ವಿಧವಾಗಿ ಅಲಂಕರಿಸಲಾಗಿತ್ತು. ಕಳಶಕ್ಕೆ ಸೀರೆ-ಕುಪ್ಪುಸ ಸಮರ್ಪಿಸಿ, ಚಿನ್ನಾಭರಣಗಳಿಂದ ಅಲಂಕರಿಸಿದ್ದ ರೀತಿ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಹಣ್ಣಿನ ಪಳಾವಳಿ, ತರಾವರಿ ಭಕ್ಷ್ಯಗಳ ನೈವೇದ್ಯ, ವಿವಿಧ ಬಗೆಯ ಅಲಂಕಾರಿಕ ಹೂಗಳಿಂದ ಮಾಡಲಾಗಿದ್ದ ಅಲಂಕಾರ, ಬಣ್ಣದ ವಿದ್ಯುತ್‌ ದೀಪಗಳ ಸಿಂಗಾರ ಗಮನ ಸೆಳೆಯುತ್ತಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಹಿಳಾ ಭಕ್ತಾದಿಗಳಿಗೆ ಅರಿಶಿಣ-ಕುಂಕುಮ, ಬಳೆ ಪ್ರಸಾದ ವಿತರಿಸಲಾಯಿತುಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮೀಯನ್ನು ಪೂಜಿಸಿದ ಮಹಿಳೆಯರು ಅಕ್ಕಪಕ್ಕದ ಮನೆಗಳು, ತಮ್ಮ ಬಂಧುಗಳನ್ನು ಮನೆಗೆ ಆಹ್ವಾನಿಸಿ ಅರಿಶಿಣ-ಕುಂಕುಮ ನೀಡುವ ಮೂಲಕ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು. ಮನೆಯಲ್ಲಿರುವ ಹಣ, ಚಿನ್ನ-ಬೆಳ್ಳಿ ಆಭರಣಗಳು, ಸಂಪತ್ತನ್ನು ಮಹಾಲಕ್ಷ್ಮೀಯ ಮುಂದಿರಿಸಿ ಪೂಜಿಸಲಾಗಿತ್ತು. ರಾತ್ರಿಯಾದರೂ ಸಂಭ್ರಮ ಮುಂದುವರೆದಿತ್ತು.ಫೋಟೋ-8ಕೆಡಿಬಿಪಿ1- ದೊಡ್ಡಬಳ್ಳಾಪುರದ ಮನೆಮನೆಗಳಲ್ಲಿ ಮಹಾಲಕ್ಷ್ಮೀಯ ತರಾವರಿ ಆರಾಧನೆ ಕಣ್ಮನ ಸೆಳೆಯುವಂತಿತ್ತು.

--8ಕೆಡಿಬಿಪಿ2- ದೊಡ್ಡಬಳ್ಳಾಪುರದ ಮನೆಮನೆಗಳಲ್ಲಿ ಮಹಾಲಕ್ಷ್ಮೀಯ ತರಾವರಿ ಆರಾಧನೆ ಕಣ್ಮನ ಸೆಳೆಯುವಂತಿತ್ತು.