ವರಮಹಾಶ್ರೀಲಕ್ಷ್ಮಿ ವ್ರತಾಚರಣೆ

| Published : Aug 09 2025, 12:00 AM IST

ಸಾರಾಂಶ

ಹತ್ತಾರು ವರ್ಷಗಳ ಹಿಂದೆ ಕೆಲವೇ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ವರಮಹಾಲಕ್ಷ್ಮಿ ಪೂಜೆ ಇದೀಗ ಜಾತಿಬೇಧವಿಲ್ಲದೇ ಪ್ರತಿ ಮನೆಯಲ್ಲೂ ನಡೆಯುತ್ತಿದ್ದು, ಉಳ್ಳವರು ಮನೆಯಲ್ಲಿನ ಒಡವೆ, ಚಿನ್ನ, ಹಣ ರಾಶಿ ಹಾಕಿ ಪೂಜಿಸಿದರೆ ಸಾಮಾನ್ಯ, ಮಧ್ಯಮ ವರ್ಗದ ಜನತೆ ಹೂ, ಹಣ್ಣುಗಳಿಂದ ದೇವಿಯನ್ನು ಪೂಜಿಸಿ ಪ್ರಾರ್ಥಿಸುತ್ತಾರೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾದ್ಯಂತ ಹೂ, ಹಣ್ಣು, ದಿನಸಿ ಬೆಲೆ ಗಗನಕ್ಕೇರಿದ್ದರೂ ಕುಗ್ಗದ ನಾಗರೀಕರು ಹಿಂದಿನ ವರ್ಷಗಳಿಗಿಂತ ಹೆಚ್ಚು ಸಡಗರ,ಸಂಭ್ರಮ ಹಾಗೂ ಶ್ರದ್ಧಾಭಕ್ತಿಗಳಿಂದ ನಗರದಲ್ಲಿ ಸಾಂಪ್ರದಾಯಿಕ ವರಮಹಾಲಕ್ಷ್ಮಿ ವ್ರತ ಆಚರಿಸಲಾಯಿತು.ವರಮಹಾಲಕ್ಷ್ಮಿ ಹಬ್ಬವನ್ನು ಹೆಚ್ಚಿನ ಜನತೆ ಆಚರಿಸುವ ಕಾರಣ ಪೂಜೆ ಮಾಡಿಸುವ ಪುರೋಹಿತರಿಗೆ ಫುಲ್ ಡಿಮ್ಯಾಂಡ್ ಕಂಡು ಬಂತು. ಪುರೋಹಿತರು ಸಿಗೋದಿಲ್ಲ ಎಂಬ ಕಾರಣದಿಂದ ಕೆಲವು ಕುಟುಂಬಗಳು ರಾತ್ರಿಯಿಡಿ ನಿದ್ದೆಗೆಟ್ಟು ಪೂಜೆಗೆ ಸಿದ್ದಗೊಳಿಸಿ ಮುಂಜಾನೆ ೪ ಗಂಟೆಯಿಂದಲೇ ಪೂಜೆ ಮಾಡಿಸಿದ್ದು ಸಾಮಾನ್ಯವಾಗಿತ್ತು.

ಲಕ್ಷ್ಮೀಗೆ ವಿವಿಧ ಅಲಂಕಾರ

ಹಲವು ಮನೆಗಳಲ್ಲಿ ಲಕ್ಷ್ಮಿ ದೇವಿಗೆ ಹಣದ ಅಲಂಕಾರ ಮಾಡಿದ್ದರೆ, ಕೆಲವು ಮನೆಗಳಲ್ಲಿ ಕಳಶವಿಟ್ಟು, ಸೀರೆಯುಡಿಸಿ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ನಗರದ ಪ್ರಮುಖ ಬಡಾವಣೆಗಳಲ್ಲಿ ಮುತ್ತೈದೆಯರನ್ನು ಮನೆಗೆ ಕರೆದು ಹೂ,ತಾಂಬೂಲ ನೀಡುವ ಪದ್ದತಿ ಸಂಜೆ ಮುಂದುವರೆದಿತ್ತು.

ಹತ್ತಾರು ವರ್ಷಗಳ ಹಿಂದೆ ಕೆಲವೇ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ವರಮಹಾಲಕ್ಷ್ಮಿ ಪೂಜೆ ಇದೀಗ ಜಾತಿಬೇಧವಿಲ್ಲದೇ ಪ್ರತಿ ಮನೆಯಲ್ಲೂ ನಡೆಯುತ್ತಿದ್ದು, ಉಳ್ಳವರು ಮನೆಯಲ್ಲಿನ ಒಡವೆ, ಚಿನ್ನ, ಹಣ ರಾಶಿ ಹಾಕಿ ಪೂಜಿಸಿದರೆ ಸಾಮಾನ್ಯ, ಮಧ್ಯಮ ವರ್ಗದ ಜನತೆ ಹೂ, ಹಣ್ಣುಗಳಿಂದ ದೇವಿಯನ್ನು ಪೂಜಿಸಿ ಸಂಜೆ ಹತ್ತಾರು ಮುತ್ತೈದೆಯರಿಗೆ ಕುಂಕುಮ, ತಾಂಬೂಲ ನೀಡುವ ಸಂಪ್ರದಾಯ ಮುಂದುವರೆಸಿದ್ದಾರೆ. ಕಚೇರಿಗಳು ಖಾಲಿ ಖಾಲಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ರಜೆ ಘೋಷಿಸಿಲ್ಲ, ಆದರೆ ಇರುವ ನಿರ್ಬಂದಿತ ರಜೆ ಅಧಿಕಾರಿ, ಸಿಬ್ಬಂದಿಗಳು ಪಡೆದುಕೊಂಡು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದ ಹಿನ್ನಲೆಯಲ್ಲಿ ನಗರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆ ಇದ್ದು, ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಬಿರುಸಿನ ಪ್ರಚಾರದ ನಡುವೆಯೂ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಸಂಭ್ರಮ ಕಂಡು ಬಂತು, ಕೆಲವು ವಾರ್ಡುಗಳಲ್ಲಿ ಹಬ್ಬಕ್ಕೆ ಕೆಲವು ಅಭ್ಯರ್ಥಿಗಳು ಆರ್ಥಿಕ ನೆರವು ನೀಡಿದ ಆರೋಪಗಳು ಕಂಡು ಬಂತು.