Various competitions for children at the district level
-ಉದ್ಘಾಟನೆ
---ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ
-----ಕನ್ನಡಪ್ರಭ ವಾರ್ತೆ ಯಾದಗಿರಿಮಕ್ಕಳ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ, ಯಾದಗಿರಿ ಇವರ ಸಹಯೋಗದಲ್ಲಿ ಜಿಲ್ಲೆಯಲ್ಲಿರುವ 9-16 ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಬಾಲ ಭವನ ಸೊಸೈಟಿಯ ರಾಜ್ಯ ಉಪಾಧ್ಯಕ್ಷ ಅನೀಲ್ಕುಮಾರ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ವೇಳೆ, ಮಾತನಾಡಿದ ಅವರು, ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಪ್ರತಿವರ್ಷದಂತೆ ಜಿಲ್ಲೆಯಲ್ಲಿ ಜಿಲ್ಲಾ ಬಾಲ ಭವನ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ನಡೆಯುವ ಕಲಾಶ್ರೀ ಕಾರ್ಯಕ್ರಮಕ್ಕೆ ಆಯ್ಕೆಗೊಳಿಸಲು ಇಂತಹ ಸ್ಪರ್ಧೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ, ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಜಿಲ್ಲಾ ಬಾಲ ಭವನ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಒಟ್ಟು 8 ಮಕ್ಕಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುವುದು ಹಾಗೂ ಬಾಲ ಭವನವು ತಮ್ಮ ಪ್ರತಿಭೆಯನ್ನು ಹೊರತರುವಂತಹ ಕೆಲಸ ಮಾಡುತ್ತಿದೆ.ಬಾಲ ಭವನದ ವತಿಯಿಂದ ಹಮ್ಮಿಕೊಳ್ಳುತ್ತಿರುವ ಕಲಾ ಪ್ರತಿಭೆ ಕಾರ್ಯಕ್ರಗಳಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಭೀಮರಾಯ ಮಾತನಾಡಿ, ಜಿಲ್ಲಾ ಬಾಲಭವನ ಮಕ್ಕಳ ಪ್ರತಿಭೆಯನ್ನು ಗುರುತಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು, ಅದರಲ್ಲಿ ಈ ಒಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ವಿವಿಧ ಸ್ಪರ್ಧೆಗಳಿಗಾಗಿ ಗ್ರಾಮ ಮತ್ತು ತಾಲೂಕುಗಳ ವಿವಿಧ ಶಾಲೆಗಳಿಂದ ಬಂದಿರುವುದು ತುಂಬಾ ಸಂತೋಷವಾಗಿದೆ. ನಿಮ್ಮ ಆಸಕ್ತಿಯನ್ನು ಹೀಗೆಯೇ ಮುಂದುವರೆಸಿ, ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟಕ್ಕೆ ಪ್ರತಿಭೆಯನ್ನು ಗುರುತಿಸಿ ಎಂದು ಮಕ್ಕಳಿಗೆ ಉತ್ಸಾಹ ತುಂಬಿದರು.ಸೃಜನಾತ್ಮಕ ಕಲೆ (ಚಿತ್ರಕಲೆ, ಜೇಡಿ ಮಣ್ಣಿನ ಕಲೆ, ಕರಕುಶಲೆ), ಸೃಜನಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂದ), ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ), ವಿಜ್ಞಾನದಲ್ಲಿ ನೂತನ ಅವಿಷ್ಕಾರ ಸ್ಪರ್ಧೆಗಳನ್ನು ಯಾದಗಿರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ 250 ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿನೇಶ ಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನರೇಂದ್ರರೆಡ್ಡಿ, ಸಂರಕ್ಷಣಾಧಿಕಾರಿ ಶರಣಮ್ಮ, ವರ್ಣಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಚಿತ್ರಕಲಾವಿದ ಮೇಘನಾಥ ಬೆಳ್ಳಿ, ಶಿಕ್ಷಕರಾದ ಸಾಬಯ್ಯ ಇದ್ದರು.ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯವಾಗಿ ಜಿಲ್ಲಾ ಮಟ್ಟದಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಅನೀಲ ಕುಮಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಪ್ರಶಾಂತಕುಮಾರ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ಪಾಲಕರು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.-
ಫೋಟೊ:11ವೈಡಿಆರ್3ಮಕ್ಕಳ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ, ಯಾದಗಿರಿ ಇವರ ಸಹಯೋಗದಲ್ಲಿ, ಜಿಲ್ಲೆಯಲ್ಲಿರುವ 9-16 ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.