ಶ್ರೀಧರಗಡ್ಡೆ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವಿಶೇಷ ಘಟಕ ಯೋಜನೆಯಡಿ ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಿತು.
ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವಿಶೇಷ ಘಟಕ ಯೋಜನೆಯಡಿ ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಿತು.
ಸಮಾರಂಭದ ಸಾನ್ನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದ ಶ್ರೀಧರಗಡ್ಡೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಮರಿ ಕೊಟ್ಟೂರು ದೇಶಿಕರು, ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಯುವಜನತೆಯ ಮೇಲೆ ಹೆಚ್ಚಾಗುತ್ತಿದೆ. ನಮ್ಮ ದೇಶದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಕಾಳಜಿ ತೆಗೆದುಕೊಳ್ಳಬೇಕಾದ ಯುವ ಸಮುದಾಯ ಅನ್ಯ ಸಂಸ್ಕೃತಿಗೆ ಮಾರು ಹೋಗುವುದು ಸರಿಯಲ್ಲ. ಶತಶತಮಾನಗಳ ಇತಿಹಾಸ ಹೊಂದಿರುವ ಜನಪದ ಕಲೆಗಳು, ನೃತ್ಯಗಳು, ಸಂಗೀತ, ನಾಟಕ ಮತ್ತು ಹಸ್ತಕಲೆಗಳು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದೆ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಶ್ರೀಧರಗಡ್ಡೆ ಗ್ರಾಮವು ಈ ಹಿಂದಿನಿಂದಲೂ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಗ್ರಾಮದ ಮುಖಂಡ ನಂದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದ ಕಲಾವಿದ ದೊಡ್ಡಬಸಪ್ಪ ಯಾಟಿ, ಉದ್ಯಮಿ ಎಸ್.ಡಿ. ವೀರನಗೌಡ, ಬಸವೇಶ್ವರ ಯುವಕ ಸಂಘದ ಎ.ಜಂಬನಗೌಡ, ಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ನಾಗೇಂದ್ರಪ್ಪ, ಪಿ.ನಿರಂಜನ್, ಬಿ.ಬಸವರಾಜ್ ಭಾಗವಹಿಸಿದ್ದರು.ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್‌ನ ಅಧ್ಯಕ್ಷ ವೈ.ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಜಡೇಶ್ ಎಮ್ಮಿಗನೂರು, ವೈ.ಉಮೇಶ್ ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಪಿ.ರೇಖಾ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಬಂಡಿಹಟ್ಟಿ ಕೀಬೋರ್ಡ್, ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಕೊನೆಯಲ್ಲಿ ಹುಲಿಗೆಮ್ಮ ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಸಹನಾ, ತಂಡದಿಂದ ಸುಗಮ ಸಂಗೀತ, ಜಾನಪದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.