ಮಿನಿವಿಧಾನಸೌಧದ ಮೂರನೇ ಮಹಡಿಯಲ್ಲಿ ಎಂಟು ಕೊಠಡಿಗಳು ಸರ್ವೇ ಇಲಾಖೆಗೆ ಮೀಸಲಾಗಿದ್ದು, ಕಚೇರಿಗೆ ಪೀಠೋಪಕರಣಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ಈ ಕಚೇರಿಯು ಮಿನಿ ವಿಧಾನಸೌಧಕ್ಕೆ ಬರಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಾಗಿ ಮೂರನೇ ಮಹಡಿಯಲ್ಲಿ ೭೫೦ ಚದರ ಅಡಿ ಕೊಠಡಿ ಮೀಸಲಿಡಲಾಗಿದೆ. ಆದರೆ, ಸಬ್ ರಿಜಿಸ್ಟ್ರಾರ್ ಪ್ರಕಾರ ಕಚೇರಿಯಲ್ಲಿ ಕಡತಗಳ ಸಂಖ್ಯೆ ವಿಪರೀತ. ಆದ್ದರಿಂದ ಕನಿಷ್ಠ ೨೦೦೦ ಚದರ ಅಡಿ ವಿಸ್ತೀರ್ಣದ ಕೊಠಡಿ ಬೇಕು. ಅಲ್ಲದೆ ಮೂರನೇ ಮಹಡಿಗೆ ಸಾಧ್ಯವಾದರೆ ಎರಡನೇ ಮಹಡಿಯಲ್ಲಿ ಕೊಠಡಿ ನೀಡಿ ಅಥವಾ ಈಗಿರುವ ಟ್ರಜರಿ ಕಚೇರಿಯನ್ನು ಮೂರನೇ ಮಹಡಿಗೆ ವರ್ಗಾಯಿಸಿ ಮೊದಲ ಮಹಡಿಯಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಅವಕಾಶ ನೀಡಿ ಎಂಬ ಮನವಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರಿ ಕಚೇರಿಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಕೆಲಸಕ್ಕಾಗಿ ಪಟ್ಟಣದ ಎಲ್ಲೆಡೆ ಅಲೆಯುವುದು ತಪ್ಪಲಿದೆ.

೨೦೦೮ರಲ್ಲಿ ನಿರ್ಮಾಣವಾದ ಮೊದಲ ಹಂತದ ಮಿನಿವಿಧಾನಸೌಧದಲ್ಲಿ ತಾಲೂಕು ಕಚೇರಿ ಹಾಗೂ ಖಜಾನೆ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಕಚೇರಿಗಳಿಗೂ ಸ್ಥಳಾವಕಾಶ ದೊರೆಯದ ಕಾರಣ ಕಂದಾಯ ಇಲಾಖೆಯ ವಿವಿಧ ಶಾಖೆಗಳಾದ ಸರ್ವೆ, ರಿಜಿಸ್ಟ್ರಾರ್‌, ನಾಡ ಕಚೇರಿಗಳು ಪಟ್ಟಣದ ಒಂದೊಂದು ದಿಕ್ಕಿನಲ್ಲಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವಂತಾಗಿತ್ತು. ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ ತರುವ ಮಿನಿ ವಿಧಾನಸೌಧ ಪರಿಕಲ್ಪನೆ ಇಲ್ಲಿ ಸಾಧ್ಯವಾಗಿರಲಿಲ್ಲ. ೨೦೧೯-೨೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿಯವರಿಗೆ ಸಮಸ್ಯೆಯ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಲೂರು ಹಾಗೂ ಸಕಲೇಶಪುರ ಮಿನಿವಿಧಾನಸೌಧದ ಎರಡನೇ ಹಂತದ ಕಾಮಗಾರಿಗೆ ತಲಾ ಮೂರು ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ೨೦೨೧ರಲ್ಲಿ ಆರಂಭವಾದ ಎರಡನೇ ಹಂತದ ಮಿನಿವಿಧಾನಸೌಧದ ಕಾಮಗಾರಿ ೨೦೨೫ರ ಅಂತ್ಯದಲ್ಲಿ ಮುಕ್ತಾಯಗೊಂಡಿದ್ದು, ೨೦೨೫ರ ನವೆಂಬರ್‌ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನದಲ್ಲೇ ಡಿಜಿಟಲ್ ಮೂಲಕ ಮಿನಿವಿಧಾನಸೌಧದ ಉದ್ಘಾಟನೆ ನೆರವೇರಿಸಿದ್ದರು. ಆದರೆ, ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಮಿನಿವಿಧಾನಸೌಧಕ್ಕೆ ಯಾವುದೇ ಕಚೇರಿಗಳು ಸ್ಥಳಾಂತರಗೊಳ್ಳದಾಗಿದ್ದವು. ಆದರೆ, ಕಳೆದ ೧೫ ದಿನಗಳ ಹಿಂದೆ ಉಪವಿಭಾಗಾಧಿಕಾರಿಗಳು ತಾವೇ ಮುಂದಾಗಿ ತಮ್ಮ ಕಚೇರಿಯನ್ನು ಮಿನಿವಿಧಾನಸೌಧದ ಎರಡನೇ ಅಂತಸ್ಥಿಗೆ ಸ್ಥಳಾಂತರಗೊಳಿಸಲಾಗಿದೆ.

ಮಿನಿವಿಧಾನಸೌಧದ ಮೂರನೇ ಮಹಡಿಯಲ್ಲಿ ಎಂಟು ಕೊಠಡಿಗಳು ಸರ್ವೇ ಇಲಾಖೆಗೆ ಮೀಸಲಾಗಿದ್ದು, ಕಚೇರಿಗೆ ಪೀಠೋಪಕರಣಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ಈ ಕಚೇರಿಯು ಮಿನಿ ವಿಧಾನಸೌಧಕ್ಕೆ ಬರಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಾಗಿ ಮೂರನೇ ಮಹಡಿಯಲ್ಲಿ ೭೫೦ ಚದರ ಅಡಿ ಕೊಠಡಿ ಮೀಸಲಿಡಲಾಗಿದೆ. ಆದರೆ, ಸಬ್ ರಿಜಿಸ್ಟ್ರಾರ್ ಪ್ರಕಾರ ಕಚೇರಿಯಲ್ಲಿ ಕಡತಗಳ ಸಂಖ್ಯೆ ವಿಪರೀತ. ಆದ್ದರಿಂದ ಕನಿಷ್ಠ ೨೦೦೦ ಚದರ ಅಡಿ ವಿಸ್ತೀರ್ಣದ ಕೊಠಡಿ ಬೇಕು. ಅಲ್ಲದೆ ಮೂರನೇ ಮಹಡಿಯಲ್ಲಿ ಕಚೇರಿ ನೀಡಿದರೆ ಲಿಫ್ಟ್‌ ಇಲ್ಲದ ಕಟ್ಟಡದಲ್ಲಿ ಮೂರನೇ ಮಹಡಿ ತಲುಪುವುದು ಅಬಲರು, ಅಂಗವಿಕಲರಿಗೆ ಸಾಧ್ಯವಿಲ್ಲ. ಸಾಧ್ಯವಾದರೆ ಎರಡನೇ ಮಹಡಿಯಲ್ಲಿ ಕೊಠಡಿ ನೀಡಿ ಅಥವಾ ಈಗಿರುವ ಟ್ರಜರಿ ಕಚೇರಿಯನ್ನು ಮೂರನೇ ಮಹಡಿಗೆ ವರ್ಗಾಯಿಸಿ ಮೊದಲ ಮಹಡಿಯಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಅವಕಾಶ ನೀಡಿ ಎಂಬ ಮನವಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು ಇನ್ನೂ ಪರಿಶೀಲನೆ ಹಂತದಲ್ಲಿದ್ದು, ಈ ತಿಂಗಳ ಅಂತ್ಯದೊಳಗೆ ಈ ಕಚೇರಿ ಸಹ ಮಿನಿ ವಿಧಾನಸೌಧ ತಲುಪುವುದು ನಿಶ್ಚಿತ ಎನ್ನಲಾಗುತ್ತಿದೆ.

ಹತ್ತಿರವಾದ ನಾಡಕಚೇರಿ:

ಮಿನಿವಿಧಾನ ಸೌಧದಿಂದ ಒಂದು ಕಿ.ಮೀ. ಅಂತರದಲ್ಲಿ ಪುರಸಭೆಗೆ ಸೇರಿದ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಾಡಕಚೇರಿಯನ್ನು ಮಳೆ ನೀರು ಕೊಠಡಿಯೊಳಗೆ ಬರುತ್ತಿದೆ ಎಂಬ ಕಾರಣ ನೀಡಿ ಅಲ್ಲಿಂದಲೂ ದೂರದಲ್ಲಿದ್ದ ಎಪಿಎಂಸಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಮಿನಿವಿಧಾನ ಸೌಧದಿಂದ ಸಾಕಷ್ಟು ದೂರದಲ್ಲಿದ್ದ ನಾಡಕಚೇರಿಯನ್ನು ಸದ್ಯ ಉಪವಿಭಾಗಾಧಿಕಾರಿಗಳ ಕಚೇರಿಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಕಸಬಾ ಹೋಬಳಿಯ ಜನರ ಇನ್ನಿಲ್ಲದಂತೆ ಅತ್ತಿಂದಿತ್ತ ಇತ್ತಿಂದತ್ತ ಅಲೆಯುವುದು ತಪ್ಪಿದೆ.

ನಾಡ ಕಚೇರಿಯಾದ ಉಪವಿಭಾಗಾಧಿಕಾರಿ ಕಚೇರಿ:

೧೯೨೫ರಲ್ಲಿ ಬ್ರಿಟೀಷರು ನಿರ್ಮಿಸಿ ನಿರ್ವಹಿಸುತ್ತಿದ್ದ ಅಂದಿನ ಡಿವಿಜನಲ್‌ ಕಮಿಷನರ್ ಕಚೇರಿ ಇಂದು ಅಸಿಸ್ಟೆಂಟ್ ಕಮಿಷನರ್ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ವಿಶಿಷ್ಟ ವಾಸ್ತುಶೈಲಿಯಲ್ಲಿ ಕಟ್ಟಲಾಗಿರುವ ಕಟ್ಟಡ ಇಂದಿಗೂ ಸದೃಢವಾಗಿದ್ದು, ಕಚೇರಿಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಾದ ಕಾರಣ ಇತ್ತೀಚೆಗೆ ನಿರ್ಮಿಸಲಾಗಿರುವ ಕಟ್ಟಡದ ಮೇಲ್ಚಾವಣಿ ಮಳೆ ನೀರಿನಿಂದ ಸೋರುತ್ತಿದೆ. ಇದರಿಂದಾಗಿ ಒಂದು ಶತಮಾನ ಅಂದರೆ ೧೯೬೦ರವರೆಗೆ ಡಿವಿಜಿನಲ್ ಕಚೇರಿಯಾಗಿ ಆ ನಂತರ ಸಬ್ ಡಿವಿಜಿನಲ್ ಕಚೇರಿಯಾಗಿ ಸಾಕಷ್ಟು ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದ ಕಟ್ಟಡ ತನ್ನ ವೈಭವ ಕಳೆದುಕೊಂಡು ಸಾಮಾನ್ಯ ಸರ್ಕಾರಿ ಕಚೇರಿಯಾಗಿ ಕಾರ್ಯನಿರ್ವಹಿಸುವಂತಾಗಿದೆ.

ಒತ್ತುವರಿ;

ಸದ್ಯ ಮಿನಿವಿಧಾನ ಸೌಧದ ಎರಡನೇ ಹಂತಕ್ಕೆ ಸ್ಥಳಾಂತರಗೊಂಡಿರುವ ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸಾಕಷ್ಟು ಕೊಠಡಿಗಳನ್ನು ಮನಬಂದಂತೆ ಒತ್ತುವರಿಮಾಡಿಕೊಂಡಿರುವುದರಿಂದ ಇತರೆ ಇಲಾಖೆಗೆ ಕೊಠಡಿಗಳ ಸಮಸ್ಯೆ ತಲೆದೂರಿದೆ. ಅದೇ ರೀತಿ ಮೂರನೇ ಮಹಡಿಗೆ ಸ್ಥಳಾಂತರಗೊಳ್ಳಲಿರುವ ಸರ್ವೇ ಕಚೇರಿ ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿನ ಕೊಠಡಿಗಳನನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.ಬೇಕಿದೆ ಲಿಫ್ಟ್‌:

ನೆಲಮಹಡಿ ಸೇರಿದಂತೆ ಮಿನಿ ವಿಧಾನಸೌಧ ನಾಲ್ಕು ಮಹಡಿಗಳ ಕಟ್ಟಡವಾಗಿದೆ. ಆದರೆ, ಈ ಬೃಹತ್ ಕಟ್ಟಡಕ್ಕೆ ಲಿಫ್ಟ್‌ ಅಳವಡಿಸಲಾಗಿಲ್ಲ. ಎರಡನೇ ಹಂತದ ಕಟ್ಟಡ ಪೂರ್ಣಗೊಂಡ ವೇಳೆ ಪರಿಶೀಲನೆ ನಡೆಸಿದ ಶಾಸಕ ಸೀಮೆಂಟ್ ಮಂಜು ಲಿಫ್ಟ್‌ ಅಳವಡಿಸದಿರುವ ಬಗ್ಗೆ ಚಕಾರ ಎತ್ತಿದ್ದರು. ಇದರಿಂದಾಗಿ ಮುಂದಿನ ದಿನಗಳಲ್ಲಿ ಲಿಫ್ಟ್‌ ಅಳವಡಿಸಲು ಸ್ಥಳ ಮೀಸಲಿಡಲಾಗಿದೆ. ಆದರೆ, ಅದುವರೆಗೂ ಮೆಟ್ಟಿಲೇ ಜನರಿಗೆ ಆಶ್ರಯವಾಗಿದ್ದು ಅಂಗವಿಕಲರು, ಅಬಲರಿಗೆ ಕಷ್ಟವಾಗಲಿದೆ.

====

*ಹೇಳಿಕೆ:

ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಳ್ಳದ ಎಲ್ಲಾ ಕಚೇರಿಗಳನ್ನು ಶೀಘ್ರವೇ ಇಲ್ಲಿಗೆ ಸ್ಥಳಾಂತರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು ಹಾಗೂ ಲಿಫ್ಟ್‌ ಅಳವಡಿಕೆಗೆ ತುರ್ತು ಕ್ರಮ ಕೈಗೊಳ್ಳುವ ಮೂಲಕ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಮಿನಿವಿಧಾನ ಸೌಧಕ್ಕೆ ಎಲ್ಲ ಕಚೇರಿಗಳು ಸ್ಥಳಾಂತರಗೊಂಡರೆ ಜನರ ಬವಣೆ ತಪ್ಪಲಿದೆ.

ಸಿಮೆಂಟ್ ಮಂಜು ಶಾಸಕ