ಸಾರಾಂಶ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾದ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರು ಬಂದಿದ್ದರಿಂದ ಗಂಗಾವತಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತುಂಡಾದ ಹಿನ್ನೆಲೆ ನದಿಗೆ ಅಧಿಕ ನೀರು । ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ
ಗಂಗಾವತಿ- ಕಂಪ್ಲಿ ಸೇತುವೆ ಸಂಚಾರ ಸ್ಥಗಿತಕನ್ನಡಪ್ರಭ ವಾರ್ತೆ ಗಂಗಾವತಿ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾದ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರು ಬಂದಿದ್ದರಿಂದ ಗಂಗಾವತಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ.ಜಲಾಶಯದಿಂದ ನದಿಗೆ 1.15 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಗಂಗಾವತಿ- ಕಂಪ್ಲಿ ಸೇತುವೆ ಮೇಲೆ ನೀರು ಬಂದಿದೆ. ಇದರಿಂದಾಗಿ ಸೇತುವೆ ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ಆನೆಗೊಂದಿ, ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ), ಸೂರ್ಯ ನಾರಾಯಣ ದೇವಸ್ಥಾನ, ಚಿಂತಾಮಣಿ, ಈಶ್ವರ ದೇವಸ್ಥಾನ, ಪಂಪಾ ಸರೋವರ, ನವವೃಂದಾವನ ಗಡ್ಡೆ, ಋಷ್ಯಮುಖ ಪರ್ವತ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತಗೊಂಡಿವೆ.
ನದಿ ತೀರದ ಗ್ರಾಮಗಳಾಗಿರುವ ಚಿಕ್ಕ ಜಂತಗಲ್, ಕಂಪ್ಲಿ, ಆನೆಗೊಂದಿ, ಹನುಮನಹಳ್ಳಿ, ಸಾಣಾಪುರ ಸೇರಿದಂತೆ ವಿವಿಧ ನದಿ ತೀರದ ಗ್ರಾಮಗಳ ಜನರಿಗೆ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. ಕಂಪ್ಲಿ ಸೇತುವೆ ಮೇಲೆ ಪ್ರವಾಹ ಬರುತ್ತಿದ್ದರಿಂದ ವಾಹನಗಳ ಸಂಚಾರ ಕಡೇ ಬಾಗಿಲು ಮಾರ್ಗದಿಂದ ಹೋಗಲು ಸೂಚಿಸಲಾಗಿದೆ.ಈಗಾಗಲೇ ತಾಲೂಕು ಆಡಳಿತ ನದಿ ತೀರದ ಗ್ರಾಮಗಳಲ್ಲಿ ಡಂಗುರ ಹಾಕಿ ಎಚ್ಚರಿಕೆ ನೀಡಿದ್ದಾರೆ. ಶಾಲೆ ಮತ್ತು ದೇವಸ್ಥಾನಗಳಲ್ಲಿಯೂ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಿದೆ.
ಕಳೆದ ವಾರದ ಹಿಂದೆ ಅಷ್ಟೇ ನದಿಗೆ ಅಧಿಕ ನೀರು ಬಂದಿದ್ದರಿಂದ ನದಿ ತೀರದ ಜನತೆಗೆ ತೊಂದರೆಯಾಗಿತ್ತು. ಈಗ ಮತ್ತೆ ನೀರು ಬರುತ್ತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.