ದಲಿತ ದೌರ್ಜನ್ಯ ಕಾಯಿದೆ ದುರ್ಬಳಕೆಗೆ ಹಳಿಯಾಳದಲ್ಲಿ ನಾನಾ ಸಂಘಟನೆಗಳ ಆಕ್ರೋಶ

| Published : Oct 10 2024, 02:17 AM IST

ದಲಿತ ದೌರ್ಜನ್ಯ ಕಾಯಿದೆ ದುರ್ಬಳಕೆಗೆ ಹಳಿಯಾಳದಲ್ಲಿ ನಾನಾ ಸಂಘಟನೆಗಳ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ಹಿಂದೂ, ಕ್ರೈಸ್ತ, ಮುಸ್ಲಿಂ, ಲಿಂಗಾಯತ ಸಮಾಜದ ಪ್ರಮುಖರು ಹಾಗೂ ಮಹಿಳೆಯರು ದಲಿತ ದೌರ್ಜನ್ಯ ಕಾಯಿದೆಯ ದುರ್ಬಳಕೆಯನ್ನು ಖಂಡಿಸಿದರು.

ಹಳಿಯಾಳ: ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಳಿಯಾಳ ಠಾಣೆಯ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅನಗತ್ಯವಾಗಿ ಕಿರುಕುಳ ಕೊಡುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಅಮಾಯಕರ ಮೇಲೆ ದಲಿತ ದೌರ್ಜನ್ಯ ಕಾಯಿದೆಯ ದುರುಪಯೋಗ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಜನಗಾ ಗ್ರಾಮಸ್ಥರು, ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಪಕ್ಷಾತೀತವಾಗಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ಹಿಂದೂ, ಕ್ರೈಸ್ತ, ಮುಸ್ಲಿಂ, ಲಿಂಗಾಯತ ಸಮಾಜದ ಪ್ರಮುಖರು ಹಾಗೂ ಮಹಿಳೆಯರು ದಲಿತ ದೌರ್ಜನ್ಯ ಕಾಯಿದೆಯ ದುರ್ಬಳಕೆಯನ್ನು ಖಂಡಿಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಮೊದಲು ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಪ್ರಭಾರ ಇಒ ಸತೀಶ ಆರ್. ಅವರಿಗೆ ಮನವಿ ಸಲ್ಲಿಸಿ ಅಲ್ಲಿಂದ ಘೋಷಣೆ ಕೂಗುತ್ತ ತಾಲೂಕಾಡಳಿತ ಸೌಧಕ್ಕೆ ತೆರಳಿ ಪ್ರತಿಭಟನಾ ಸಭೆ ನಡೆಸಿದರು.ದೌರ್ಜನ್ಯಕ್ಕೆ ಖಂಡನೆ:ಸಭೆಯಲ್ಲಿ ಮಾತನಾಡಿದ ಮುಖಂಡ ಹನುಮಂತ ಚಿನಗಿಣಕೊಪ್ಪ, ಪುರಸಭಾ ಸದಸ್ಯ ಸಂತೋಷ ಘಟಕಾಂಬ್ಳೆ, ಚಂದ್ರಕಾಂತ ಕಲಬಾವಿ, ಮುಸ್ಲಿಂ ಮುಖಂಡ ಸುಭಾನಿ ಹುಬ್ಬಳ್ಳಿ, ರೈತ ಮುಖಂಡ ನಾಗೇಂದ್ರ ಜಿವೋಜಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಅವರು, ಸಂಘಟನೆಗಳ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಎಂದು ಬಿಂಬಿಸಿಕೊಳ್ಳುವ ಕೆಲವರು ಅಮಾಯಕರ ಮೇಲೆ ಹಾಗೂ ಅಧಿಕಾರಿಗಳ ಮೇಲೂ ಬೆದರಿಕೆ ಹಾಕುತ್ತಾ ದಲಿತ ದೌರ್ಜನ್ಯದ ಸುಳ್ಳು ಪ್ರಕರಣ ದಾಖಲಿಸಿ ತಾಲೂಕಿನ ಮತೀಯ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಅಂಥವರಿಗೆ ಹಳಿಯಾಳದ ನಕಲಿ ಪತ್ರಕರ್ತರು ಬೆಂಬಲ ನೀಡುತ್ತಿದ್ದಾರೆ. ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಹಾಗೂ ಸಿಪಿಐ ಜಯಪಾಲ ಪಾಟೀಲ ಅವರಿಗೆ ಮನವಿ ಸಲ್ಲಿಸಿ, ದಲಿತ ದೌರ್ಜನ್ಯ ಕಾಯಿದೆಯ ದುರ್ಬಳಕೆ ಮಾಡುವವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜನಗಾ ಗ್ರಾಪಂ ಉಪಾಧ್ಯಕ್ಷೆ ಭೀಮಾ ಕಮ್ಮಾರ, ಕಸ್ತೂರಿ ವಡ್ಡರ, ಜಯಾ ಅಲ್ಲುಟಿಕರ, ಕೃಷ್ಣ ಕರ್ಲಕೊಪ್ಪ, ತುಕಾರಾಮ ಠೋಸುರ, ರವಿ ಹರಿಜನ, ವಿಲಾಸ ಕಣಗಲಿ, ಸುಂದರ ಮಾದರ, ಸುಭಾಸ ಕೋಲಕಾರ, ಜ್ಞಾನೇಶ್ವರ ಗಜಾಕೋಶ, ಪ್ರಮುಖರಾದ ಫಯಾಜ ಶೇಖ್, ಸಂಜು ಗುನಗಾ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.