ಸಾರಾಂಶ
ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯವು ಸುಸೂತ್ರವಾಗಿ ಜರುಗಿತು. ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದತ್ತ ಯಾವುದೇ ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸರಿಲ್ಲ.ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯವು ನಡೆಯಿತು. ಎಣಿಕೆ ಕೇಂದ್ರಕ್ಕೆ ಪಕ್ಷಗಳ ಚುನಾವಣಾ ಏಜೆಂಟ್ ಗಳು ಮಾತ್ರ ಹಾಜರಾಗಿದ್ದರು. ಉಳಿದಂತೆ ಮುಖಂಡರು, ಕಾರ್ಯಕರ್ತರು ಸುಳಿಯಲಿಲ್ಲ. ಪೊಲೀಸರಿಂದ ಬಿಗಿ ಭದ್ರತೆಮತ ಎಣಿಕೆ ಕಾರ್ಯಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. ಆದರೆ, ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 6 ಗಂಟೆಯಿಂದಲೇ ಕೇಂದ್ರದ ಬಳಿ 500 ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿ, ಮತ ಎಣಿಕೆ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು, ವಿವಿಧ ಪಕ್ಷಗಳ ಏಜೆಂಟರನ್ನು ಹೊರತುಪಡಿಸಿ ಉಳಿದಂತೆ ಯಾರೂ ಕೇಂದ್ರ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದರು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ ಅವರು ಅಧಿಕಾರಿ ಹಾಗೂ ಸಿಬ್ಬಂದಿ ಸಭೆ ನಡೆಸಿ ಜವಾಬ್ದಾರಿ ಹಂಚಿಕೆ ಮಾಡಿ ಸ್ವತಃ ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದರು.ನಾಲ್ವರು ಡಿಸಿಪಿಗಳು, 7 ಎಸಿಪಿ, 23 ಇನ್ಸ್ ಪೆಕ್ಟರ್, 58 ಎಸ್ಐ, 76 ಎಎಸ್ಐ, 479 ಮುಖ್ಯಪೇದೆಗಳು, ಮಹಿಳಾ ಸಿಬ್ಬಂದಿ, ಸಿಎಆರ್12 ಯುನಿಟ್ ಹಾಗೂ ನಾಲ್ಕು ಕಮಾಂಡೊ ಪಡೆಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಸಂಚಾರ ನಿರ್ವಹಣೆಗಾಗಿ ಇನ್ಸ್ ಪೆಕ್ಟರ್, ಎಸ್ಐ, ಎಎಸ್ಐಗಳು, ಮುಖ್ಯಪೇದೆ ಮತ್ತು ಪೇದೆಗಳನ್ನು ನಿಯೋಜಿಸಲಾಗಿತ್ತು.
ಮೊಬೈಲ್ ಕಮಾಂಡೊ ವಾಹನವೂ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿತ್ತು. ಕಟ್ಟುನಿಟ್ಟಿನ ಭದ್ರತೆ ವಹಿಸಿದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಗೊಂದಲ, ಗಲಾಟೆ, ಗದ್ದಲವಿಲ್ಲದಂತೆ ಶಾಂತಿಯುತವಾಗಿ ಮತ ಎಣಿಕೆ ಕಾರ್ಯ ಸಂಜೆ ವೇಳೆಗೆ ಮುಕ್ತಾಯಗೊಂಡಿತು.ಕಾಲೇಜಿನ ಮುಖ್ಯದ್ವಾರದ ಬಳಿ ಮೆಟಲ್ ಡೋರ್ ಡಿಟೆಕ್ಟರ್ ಗಳನ್ನು ಅಳವಡಿಸಿದ್ದ ಪೊಲೀಸರು, ಅಧಿಕೃತ ಪಾಸ್ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ತಪಾಸಣೆ ಮಾಡಿ, ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಕಾಲೇಜು ಕಟ್ಟಡದ ಪ್ರತಿ ಮಹಡಿಯಲ್ಲೂ ಬ್ಯಾರಿ ಕೇಡ್ ಅಳವಡಿಸಿ ನಿಯೋಜಿಸಿರುವ ಕೊಠಡಿಗಳಿಗೆ ಮಾತ್ರ ತೆರಳುವಂತೆ ಮಾರ್ಗವನ್ನು ಸಜ್ಜುಗೊಳಿಸಿದ್ದರು.----
ಬಾಕ್ಸ್...ಮತ ಎಣಿಕೆ ಪ್ರಕ್ರಿಯೆ
ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ಅನ್ನು ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಬೆಳಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ ಆರಂಭವಾಯಿತು. 8.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವು ಆರಂಭವಾಯಿತು.ಪ್ರತಿ ವಿಧಾನಸಭೆ ಕ್ಷೇತ್ರದ ಮತಗಳ ಎಣಿಕೆಗೆ 14 ಟೇಬಲ್ ಗಳು ವ್ಯವಸ್ಥೆ ಮಾಡಲಾಗಿತ್ತು. ಮಡಿಕೇರಿ, ವಿರಾಜಪೇಟೆ, ಹುಣಸೂರು ಕ್ಷೇತ್ರಗಳ ಮತ ಎಣಿಕೆಯು 20 ಸುತ್ತುಗಳಲ್ಲಿ ಮುಕ್ತಾಯವಾಯಿತು. ಪಿರಿಯಾಪಟ್ಟಣ 17, ಚಾಮುಂಡೇಶ್ವರಿ 25, ಕೃಷ್ಣರಾಜ 19, ಚಾಮರಾಜ 18 ಹಾಗೂ ನರಸಿಂಹರಾಜ ಕ್ಷೇತ್ರದ ಮತಗಳ ಎಣಿಕೆ 21 ಸುತ್ತುಗಳಲ್ಲಿ ನಡೆಯಿತು.