ಕನ್ನಡಪ್ರಭ ವಾರ್ತೆ ಮೈಸೂರು

ಚಿನ್ಮಯ ಮಿಷನ್ ಎಂಬ ಸಂಸ್ಥೆಯ ಉದಯಕ್ಕೆ ಕಾರಣಕರ್ತರಾದ, ಒಂದು ಮಹತ್ತರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಹರಿಕಾರರಾದ ಗುರುದೇವ ಸ್ವಾಮಿ ಚಿನ್ಮಯಾನಂದರು, ಸನಾತನ ಸಂಸ್ಕೃತಿಯ ಪರಿಚಯವನ್ನು ಇಡೀ ವಿಶ್ವಕ್ಕೆ ತಲುಪಿಸಲು ಸಂಕಲ್ಪಿಸಿದ ಸುಸಂದರ್ಭಕ್ಕೆ ಈಗ 75ನೇ ವಸಂತ ಕಾಲ. ಈ ಸುಮಧುರ ವರ್ಷವನ್ನು ಅಮೃತ ಮಹೋತ್ಸವ ದ ಆಚರಣೆಯ ಮೂಲಕ ವಿಶ್ವದಾದ್ಯಂತ ನಡೆಸಲು ಯೋಜನೆಯನ್ನು ರೂಪಿಸಲಾಗಿದೆ.1951ರ ಡಿ. 31 ರಂದು ಆರಂಭವಾದ ಪಯಣ ಈ ವರ್ಷ 75 ಸಾರ್ಥಕ ವರ್ಷಗಳನ್ನು ಪೂರೈಸುತ್ತಿದೆ.ಈ ಪರ್ವಕಾಲವನ್ನು ಸ್ಮರಣೀಯವಾಗಿಸಲು ಚಿನ್ಮಯ ಅಮೃತ ವಾಹಿನಿ ಎಂಬ ವಾಹನ ಭಾರತಾದ್ಯಂತ ಸಂಚರಿಸಿ, ಇಂದಿನ ಪೀಳಿಗೆಗೆ ಗುರುದೇವರ ಸಂದೇಶವನ್ನು ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ವಾಹಿನಿಯು ಮೈಸೂರು ನಗರಕ್ಕೆ ಮಾ. 6 ಮತ್ತು 7 ರಂದು ಬರಲಿದ್ದು, ಮೈಸೂರು ಚಿನ್ಮಯ ಮಿಷನ್ ನಿಂದ ಹಲವಾರು ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.ಕಾರ್ಯಕ್ರಮಗಳ ವಿವರ- ಮಾ. 6ರ ಬೆಳಗ್ಗೆ 11 ರಿಂದ 12ರವರೆಗೆ ಶ್ರೀ ಗುರುದೇವ ದತ್ತ ಸನ್ನಿಧಿ, 6ನೇ ಮುಖ್ಯರಸ್ತೆ, ಗೋಕುಲಂ 3ನೇ ಹಂತ, ಮೈಸೂರು. ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಮೈಸೂರು ರಾಮಕೃಷ್ಣ ಮಿಷನ್ನಿನ ಪೂಜ್ಯ ಸ್ವಾಮಿ ಮಹಾಮೇಧಾನಂದಜಿ ಅವರು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.ಮಾ. 7ರ ಬೆಳಗ್ಗೆ 9.30 ರಿಂದ 10.30ರವರೆಗೆ ಶ್ರೀ ರಾಮಕ್ಷೇತ್ರ, 5ನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು. ಈ ಸ್ಥಳದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಸಾಮೂಹಿಕ ಪಾರಾಯಣ ನಡೆಯಲಿದೆ.ನಂತರ 11 ರಿಂದ 12ರವರೆಗೆ ಶ್ರೀ ಶಿವಾನಂದ ಜ್ಞಾನಾಲಯ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆ, ಲಕ್ಷ್ಮೀಪುರಂ, ಮೈಸೂರು. ಈ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ.ಕೆ.ಎಲ್. ಪ್ರಸನ್ನಾಕ್ಷಿ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಗುರುದೇವರ ಕುರಿತು ಮಾತನಾಡುವರು.ಸಂಜೆ 5.30 ರಿಂದ 7.30 ರವರೆಗೆ ಶ್ರೀ ಸಚ್ಚಿದಾನಂದ ವಿಲಾಸ, ಅಭಿನವ ಶಂಕರಾಲಯ, ಫೋರ್ಟ್ ಮೊಹಲ್ಲಾ, ಮೈಸೂರು. ಈ ಸಭಾಂಗಣದಲ್ಲಿ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು. ಇದರಲ್ಲಿ ಶ್ರೀಮದ್ಭಗವದ್ಗೀತೆಯ 15ನೇ ಅಧ್ಯಾಯ ಮತ್ತು ಭಗವದ್ಗೀತೆಯ ಐದು ಅಮೂಲ್ಯ ರತ್ನಗಳಂತೆ ಕಂಗೊಳಿಸುತ್ತಿರುವ ಪ್ರಮುಖ ಐದು ಶ್ಲೋಕಗಳಾದ ಗೀತಾ ಪಂಚಾಮೃತ ದ ಸಾಮೂಹಿಕ ಪಾರಾಯಣ ನಡೆಯಲಿದೆ.ಮೈಸೂರಿನ ಎಲ್ಲ ಆಸ್ತಿಕ ಬಂಧುಗಳು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರುಗಳ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.-----------------