ದೇವನಹಳ್ಳಿ: ಸರ್ಕಾರಿ ಶಾಲಾ ಕಾಲೆಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎನ್ನೆಸ್ಸೆಸ್‌, ಎನ್‌ಸಿಸಿ, ಯುವ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊದಲು ಉಪನ್ಯಾಸಕರ ಮಾತನ್ನು ಆಲಿಸಬೇಕು. ಅದನ್ನು ಮನದಟ್ಟು ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ತಂದೆ ತಾಯಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಐಪಿಎಸ್ ಅಧಿಕಾರಿ ಧನಂಜಯ್ ಮಾತನಾಡಿ, ತರಗತಿಯಲ್ಲಿ ನಿಮಗೆ ಅರ್ಥವಾಗದ ವಿಷಯಗಳನ್ನು ಉಪನ್ಯಾಸಕರ ಬಳಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಓದಿನಲ್ಲಿ ಗುರಿ ಶ್ರದ್ದೆ ಇಟ್ಟಿರಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗದೆ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ನಿಮಗಿಷ್ಟದ ಆಯ್ಕೆಯೊಂದಿಗೆ ನಿರ್ದಿಷ್ಟ ಗುರಿ ಇದ್ದರೆ ನನ್ನಂತೆ ನೀವು ಉನ್ನತ ಅಧಿಕಾರಿಗಳು ಆಗಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಕಡಿಮೆ ಮಾತನಾಡಬೇಕು ಹೆಚ್ಚು ಓದಬೇಕು. ಶಿಕ್ಷಣದ ಜೊತೆಗೆ ಶಿಸ್ತನ್ನು ನಿಮ್ಮಲ್ಲಿ ಅಳವಡಿಸಿಕೊಂಡರೆ, ಆಲಿಸುವ ಲಕ್ಷಣ ತಾನಾಗಿಯೇ ಹುಟ್ಟುತ್ತದೆ. ನಿಮ್ಮ ಕಾಲೇಜಿನ ವಾತಾವರಣ ಹಾಗೂ ಆವರಣ ತುಂಬಾ ಚೆನ್ನಾಗಿದೆ, ವಿದ್ಯಾಭ್ಯಾಸದ ಜೊತೆಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರಯತ್ನ ಮಾಡಿ. ಹೆಚ್ಚಾಗಿ ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓಡಬೇಕು. ನಿಮಲ್ಲಿ ಯಾರಿಗಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಆಸಕ್ತಿ ಇದ್ದರೆ ನಮ್ಮನ್ನು ಕೇಳಿ ಸದಾ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲ ಡಿ.ಮಂಜಯ್ಯ ಕಾಲೇಜಿನ ಬೆಳವಣಿಗೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಕ್ರೀಡಾ ವಿಜೇತರಿಗೆ, ಸೌಟ್ಸ್ ಮತ್ತು ಗೈಡ್ಸ್‌ನ ರೇಂಜರ್ ಮತ್ತು ರೋವರ್ಸ್‌ಗಳಿಗೆ, ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷರಾದ ಅನಂತಕುಮಾರಿ, ಪ್ರಾಂಶುಪಾಲರಾದ ಡಿ ಮಂಜಯ್ಯ, ಎನ್ನೆಸ್ಸೆಸ್‌ ಸಂಚಾಲಕ ಕೆ.ಕೆ.ರವಿಚಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆಂಪರಾಜ್, ಚೇತನಕುಮಾರ್, ಸುನೀಲ್, ಮುತ್ತುಕುಮಾರ್, ಡಾ.ರಾಜಪ್ಪ, ಉಪನ್ಯಾಸಕರಾದ ಕವಿತ, ಅನ್ನಪೂರ್ಣ, ಸತೀಶ್ ಮತ್ತಿತರರಿದ್ದರು.

೨೫ ದೇವನಹಳ್ಳಿ ಚಿತ್ರಸುದ್ದಿ: ೦೧

ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ.ರಾಜಣ್ಣ, ಮಂಡ್ಯ ಜಿಲ್ಲೆಯ ಐಪಿಎಸ್ ಅಧಿಕಾರಿ ಧನಂಜಯ್, ಪ್ರಾಂಶುಪಾಲ ಡಿ.ಮಂಜಯ್ಯ ಇತರರು ಉಪಸ್ಥಿತರಿದ್ದರು.