ಮುರುಡೇಶ್ವರದಲ್ಲಿ ಶಿವರಾತ್ರಿ ಹಬ್ಬದ ಜಾಗರಣೆಯ ಪೂರ್ವಭಾವಿಯಾಗಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಹಿಳೆಯರು ಮತ್ತು ಪುರುಷರಿಗಾಗಿ ಫೆ. 10,11ರಂದು ವಿವಿಧ ಕ್ರೀಡೆ ನಡೆಸಲಾಗುವುದು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮಾಹಿತಿ
ಕನ್ನಡಪ್ರಭ ವಾರ್ತೆ ಭಟ್ಕಳಮುರುಡೇಶ್ವರದಲ್ಲಿ ಶಿವರಾತ್ರಿ ಹಬ್ಬದ ಜಾಗರಣೆಯ ಪೂರ್ವಭಾವಿಯಾಗಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಹಿಳೆಯರು ಮತ್ತು ಪುರುಷರಿಗಾಗಿ ಫೆ. 10,11ರಂದು ವಿವಿಧ ಕ್ರೀಡೆ ನಡೆಸಲಾಗುವುದು ಎಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ವೈದ್ಯ ಹೇಳಿದರು.
ಬುಧವಾರ ಮುರುಡೇಶ್ವರದ ಆರೆನ್ನೆಸ್ ಮಿನಿಸಭಾಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮುರುಡೇಶ್ವರದ ಶಿವರಾತ್ರಿ ಆಚರಣೆ ಜನರ ಉತ್ಸವವನ್ನಾಗಿ ಮಾಡುವ ಉದ್ದೇಶದಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕ್ರೀಡಾ ಸಮಿತಿ ರಚಿಸಿಕೊಂಡು ಸಾರ್ವಜನಿರಿಗೋಸ್ಕರ ವಿವಿಧ ಕ್ರೀಡೆ ಆಯೋಜಿಸಲಾಗಿದೆ. ಕ್ಷೇತ್ರದ ಮಹಿಳೆಯರಿಗಾಗಿ ರಂಗೋಲಿ, ವೇಗ ನಡಿಗೆ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಪುರಷರಿಗಾಗಿ ವಾಲಿಬಾಲ್, ಹಗ್ಗಜಗ್ಗಾಟ,ವೇಗ ನಡಿಗೆ, ಓಟ ಮುಂತಾದ ಕ್ರೀಡೆ ಆಯೋಜಿಸಲಾಗಿದ್ದು, ಕ್ರೀಡೆಯಲ್ಲಿ ಭಾಗವಹಿಸುವ ಆಸಕ್ತ ಮಹಿಳೆಯರು, ಪುರುಷರು ಫೆ. 8ರ ಮಧ್ಯಾಹ್ನದೊಳಗೆ ನಯನಾ ನಾಯ್ಕ (8123475771) ಹಾಗೂ ಪುರುಷರು ಶಂಕರ ಭಟ್ರಹಿತ್ಲು (9242224514) ಇವರನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.ಶಿವರಾತ್ರಿ ಹಬ್ಬದ ವಿಶೇಷವಾಗಿ ಫೆ. 12 ರಂದು ಸಂಜೆ ಮುರುಡೇಶ್ವರದ ಮಿನಿಸಭಾಭವನದಲ್ಲಿ ಆದರ್ಶ ದಂಪತಿ ಕಾರ್ಯಕ್ರಮ ನಡೆಸಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಮುರುಡೇಶ್ವರದ ಶಿವರಾತ್ರಿ ಹಬ್ಬದ ಆಚರಣೆಗೆ ಮತ್ತು ಅದರ ಪೂರ್ವಭಾವಿಯಾಗಿ ನಡೆಯುವ ಕ್ರೀಡೆ ಮುಂತಾದ ಚಟುವಟಿಕೆಗೆ ಎಲ್ಲರ ಸಹಕಾರ ಅಗತ್ಯ ಎಂದರು.ಮುರುಡೇಶ್ವರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಕಾಮತ್ ಮಾತನಾಡಿದರು. ಈ ಸಂದರ್ಭ ಮಾವಳ್ಳಿ ಗ್ರಾಪಂ 1ರ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ ಗ್ರಾಪಂ2ರ ಅಧ್ಯಕ್ಷೆ ನಾಗರತ್ನಾ ಪಡಿಯಾರ, ಪ್ರಮುಖರಾದ ಮಂಜುನಾಥ ನಾಯ್ಕ, ಗಜಾನನ ನಾಯ್ಕ, ಶಂಕರ ಭಟ್ಟಹಿತ್ಲು. ಗೀತಾ ಕಾಮತ್, ಸತೀಶ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.