ತಮಿಳುನಾಡಿನ ಚಿನ್ನದ ಅಂಗಡಿಯಲ್ಲಿ ಮಾರಾಟ । 47 ಲಕ್ಷ ರು ಮೌಲ್ಯದ ಚಿನ್ನಾಭರಣ, 475 ಗ್ರಾಂ ಬೆಳ್ಳಿ ವಸ್ತು ವಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಒಟ್ಟು 7 ವಿವಿಧ ಅಪರಾಧ ಪ್ರಕರಣಗಳನ್ನು ಬೇಧಿಸಿ 7 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 47 ಲಕ್ಷ ರು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಇಎಂಎಲ್ ನಗರದ ಶಾಂತಿನಗರದ ನಿತ್ಯಾನಂದ ಹಾಗೂ ಹೆಚ್‌ಪಿ ನಗರದ ಅಲೆಗ್ಜಾಂಡರ್ ಮನೆಗಳಲ್ಲಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳಾದ ಸುರೇಶ್, ವೀರಾಪಾಂಡಿಯನ್ ಹಾಗೂ ಲಕ್ಷ್ಮಿಕಾಂತನ್ ತಮಿಳುನಾಡಿನ ರಾಜ್ಯದವರನ್ನು ಬಂಧಿಸಿ ಅವರಿಂದ 45 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಹಾಗೂ 475 ಗ್ರಾಂ ಬೆಳ್ಳಿ ವಸ್ತುಗಳನ್ನು ತಮಿಳುನಾಡಿನ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.ಬೇತಮಂಗಲ ಠಾಣೆ ವ್ಯಾಪ್ತಿಯ ನೆರ್ನಹಳ್ಳಿ ಗ್ರಾಮದ ವನಿತಮ್ಮ ಮನೆಯಲ್ಲಿ ಕಳ್ಳತವಾಗಿದ್ದ 500 ಬೆಳ್ಳಿ ಆಭರಣಗಳನ್ನು ಹಾಗೂ 35ಸಾವಿರ ನಗದನ್ನು ಅದೇ ಗ್ರಾಮದ ಸೋಮರೆಡ್ಡಿ, ವೆಂಕಟಪ್ಪ ಮತ್ತು ರಾಜಶೇಖರ್ ನನ್ನು ದಸ್ತಗಿರಿ ಮಾಡಲಾಗಿದೆ. ಪೊಲೀಸರು ಮಾಲನ್ನು ವಶಕ್ಕೆ ಪಡೆದಿದ್ದು, ಇವರು ಕಾಮಸಮುದ್ರ ಠಾಣೆ ವ್ಯಾಪ್ತಿಯಲ್ಲಿಯೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ತಾಲೂಕಿನ ಯರಗೋಳ್ ಗ್ರಾಮದಲ್ಲಿ ವೆಂಕುಬಾಯಿ ಎಂಬುವರ ಮನೆಯಲ್ಲಿ ಇದೇ ಗ್ರಾಮದ ಉಪೇಂದ್ರ ಎಂಬಾತ 24 ಗ್ರಾಂ ತೂಕದ ಚಿನ್ನದ ಚೈನ್ ಕಳವು ಮಾಡಿದ್ದು, ಈ ಆರೋಪಿಯನ್ನೂ ಸಹ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಒಟ್ಟು 7 ವಿವಿಧ ಕಳವು ಪ್ರಕರಣಗಳಲ್ಲಿ 46 ಲಕ್ಷ 91 ಸಾವಿರ ಮೌಲ್ಯದ 307 ಗ್ರಾಂ ಬಂಗಾರದ ಆಭರಣಗಳು ಮತ್ತು 975 ಗ್ರಾಂ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಇನ್ಸ್‌ಪೆಕ್ಟರ್ ರವಿಕುಮಾರ್ ಸಬ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್, ತ್ಯಾಗರಾಜ್ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಅಭಿನಂದಿಸಿದ್ದಾರೆ.