ಕಾಫಿ ನಾಡಲ್ಲಿ ವರುಣನ ಆರ್ಭಟ: ಹಲವೆಡೆ ಜಲಾವೃತ

| Published : Oct 21 2024, 12:35 AM IST

ಕಾಫಿ ನಾಡಲ್ಲಿ ವರುಣನ ಆರ್ಭಟ: ಹಲವೆಡೆ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ವರುಣನ ಆರ್ಭಟ ಭಾನುವಾರವೂ ಮುಂದುವರೆದಿತ್ತು. ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಬಂದಿದ್ದು ಜನಜೀವನ ಅಸ್ತವ್ಯಸ್ಥವಾಗಿತ್ತು. ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಹಲವೆಡೆ ಹೊಲ, ಗದ್ದೆ, ತೋಟಗಳು ಜಲಾವೃತವಾಗಿವೆ. ಕಿರು ಸೇತುವೆಗಳು ಮುಳುಗಡೆಯಾಗಿದ್ದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದೆ. ನಗರ ಪ್ರದೇಶಗಳಲ್ಲಿ ತೆರೆದ ಚರಂಡಿಗಳು ಭರ್ತಿಯಾದ ಪರಿಣಾಮ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಗುಡುಗು ಸಹಿತ ಭಾರೀ ಮಳೆ । ತೋಟ ಹೊಲಗದ್ದೆಗಳಿಗೆ ನುಗ್ಗಿದ ನೀರು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ವರುಣನ ಆರ್ಭಟ ಭಾನುವಾರವೂ ಮುಂದುವರೆದಿತ್ತು. ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಬಂದಿದ್ದು ಜನಜೀವನ ಅಸ್ತವ್ಯಸ್ಥವಾಗಿತ್ತು. ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಹಲವೆಡೆ ಹೊಲ, ಗದ್ದೆ, ತೋಟಗಳು ಜಲಾವೃತವಾಗಿವೆ. ಕಿರು ಸೇತುವೆಗಳು ಮುಳುಗಡೆಯಾಗಿದ್ದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದೆ. ನಗರ ಪ್ರದೇಶಗಳಲ್ಲಿ ತೆರೆದ ಚರಂಡಿಗಳು ಭರ್ತಿಯಾದ ಪರಿಣಾಮ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಕಾಫಿಯ ನಾಡು ಚಿಕ್ಕಮಗಳೂರು ಮಳೆಯ ಆರ್ಭಟಕ್ಕೆ ತತ್ತರಿಸುತ್ತಿದೆ. ಪ್ರತಿ ದಿನ ಒಂದಲ್ಲಾ ಒಂದು ಸಮಯಕ್ಕೆ ಬಹುತೇಕ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಮಧ್ಯಾಹ್ನ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿತ್ತು. ಭಾನುವಾರವೂ ಕೂಡ ಅದೇ ರೀತಿಯಲ್ಲಿ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ಮಳೆ ಬಂದಿದೆ.

ತರೀಕೆರೆ ತಾಲೂಕಿನಾದ್ಯಂತ ಭಾನುವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಿಗ್ಗೆ ಬಂದ ಮಳೆ ನಂತರ ಬಿಡುವು ನೀಡಿತು. ಆದರೆ, ಮಧ್ಯಾಹ್ನದ ವೇಳೆಗೆ ಮತ್ತೆ ಗುಡುಗು ಸಹಿತ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ತರೀಕೆರೆ ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರ ಪರಿಣಾಮ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಗಂಟೆಗಟ್ಟಲೆ ಜನರು ರಸ್ತೆ ಬದಿ ಯಲ್ಲಿರುವ ಅಂಗಡಿಗಳ ಮುಂದೆ ನಿಂತಿದ್ದರು.

ತರೀಕೆರೆ ಪಟ್ಟಣದಲ್ಲಿರುವ ಚಿಕ್ಕಕೆರೆ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಹರಿದು ಆಸುಪಾಸಿನ ಹೊಲಗದ್ದೆಗಳು ಜಲಾವೃತವಾಗಿದ್ದವು. ಬೆಟ್ಟದಹಳ್ಳಿಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡದೊಳಗೆ ನೀರು ನಿಂತಿದ್ದು ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ್ದರು. ಸೋಮವಾರದಂದು ಶಾಲೆಗಳು ಪುನಾರಂಭ ಆಗುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸಮೀಪದ ಆಸ್ಪತ್ರೆ ಕಟ್ಟಡ ದಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅಜ್ಜಂಪುರ ತಾಲೂಕಿನ ಸಣ್ಣ ಬೋಕಿಕೆರೆ, ಕೋರನಹಳ್ಳಿ, ಚಟ್ಟನಹಳ್ಳಿ, ಶವಪುರ ಭಾಗ ದಲ್ಲಿ ಹಳ್ಳದ ನೀರು ಹರಿದು ಭಾರೀ ಅನಾಹುತ, ಗೊಲ್ಲರಹಳ್ಳಿಯ ಹೂವಿನಹೊಲದಲ್ಲಿ ನಿಂತ ಮಳೆ‌ ನೀರು ನಿಂತಿದೆ. ಬೀರೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಧಾರಾಕಾರವಾಗಿ ಮಳೆ ಸುರಿಯಿತು. ಕಡೂರು ತಾಲೂಕಿನಲ್ಲೂ ವರುಣ ಆರ್ಭಟ ಜೋರಾಗಿತ್ತು. ಇಲ್ಲಿನ ದೊಡ್ಡ ಬೋಕಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರೀ ಮಳೆಗೆ ತೆಂಗು, ಅಡಕೆ, ಬಾಳೆ ಹಾಗೂ ಜಾನುವಾರು ಮೇವು ಸಂಪೂರ್ಣ ಬೆಳೆನಾಶಗೊಂಡಿದೆ.-- ಬಾಕ್ಸ್--ವೃದ್ಧೆ ಸಾಗಿಸಿದ ಹಳ್ಳಿಗರು

ಚಿಕ್ಕಮಗಳೂರು ತಾಲೂಕಿನಾದ್ಯಂತ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಭಾನುವಾರವೂ ಮಳೆ ಮುಂದುವರಿದಿತ್ತು. ಬೆಳಿಗ್ಗೆ ಕೆಲ ಸಮಯ ಬಂದು ಬಿಡುವು ನೀಡಿದ ಮಳೆ ಮಧ್ಯಾಹ್ನ ಮತ್ತೆ ಆರಂಭಗೊಂಡಿತು. ಸಂಜೆ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಹಲವೆಡೆ ಕಿರು ಸೇತುವೆಗಳು ಜಲಾವ್ರತವಾಗಿವೆ.

ಮುತ್ತೋಡಿ ವ್ಯಾಪ್ತಿಯ ಮಲಗಾರು ಗ್ರಾಮದ ಸಂಪರ್ಕ ಸೇತುವೆ ಮೇಲೆ ಮಳೆಯ ನೀರು ಹರಿಯುತ್ತಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿದೆ. ಸ್ಥಳೀಯರು ವೃದ್ಧೆಯನ್ನು ಅಂಗೈಲಿ ಹೊತ್ತು ಸೇತುವೆಯನ್ನು ದಾಟಿದರು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಮೂಡಿಗೆರೆಯಲ್ಲಿ ಬೆಳಿಗ್ಗೆ ಮಳೆ ಬಿಡುವು ನೀಡಿತಾದರೂ ಸಂಜೆ ನಂತರ ಆರಂಭಗೊಂಡಿತು. ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆ ಬಂದಿದೆ. ಶೃಂಗೇರಿ, ಎನ್‌.ಆರ್.ಪುರ, ಕೊಪ್ಪ, ಕಳಸ ತಾಲೂಕುಗಳಲ್ಲೂ ಭಾನುವಾರವೂ ಗುಡುಗು ಸಹಿತ ಮಳೆ ಮುಂದುವರಿದಿತ್ತು. ಗುಡುಗು ಸಹಿತ ಮಳೆಯಿಂದಾಗಿ ಜಿಲ್ಲೆ ತತ್ತರಿಸುತ್ತಿದೆ.

--

ಬೆಟ್ಟದಹಳ್ಳಿಯಲ್ಲಿ ಭಾರೀ ಮಳೆಯಿಂದಾಗಿ ಶಾಲೆ ಕಟ್ಟಡದೊಳಕ್ಕೆ ನುಗ್ಗಿದ ನೀರು

ಕನ್ನಡಪ್ರಭ ವಾರ್ತೆ, ತರೀಕೆರೆ: ಸಮೀಪದ ಬೆಟ್ಟದಹಳ್ಳಿಯಲ್ಲಿ ಸುರಿದ ಭಾರೀ ಮಳಯಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದೊಳಕ್ಕೆ ನೀರು ನುಗ್ಗಿದ ಘಟನೆ ನಡೆದಿದೆ.ತಾಲೂಕಿನ ಬೆಟ್ಟದ ಹಳ್ಳಿಯಲ್ಲಿ ಸರ್ಕಾರಿ ಹೈಯರ್ ಪ್ರಾಥಮಿಕ ಶಾಲೆ ಕಟ್ಟಡ ತಗ್ಗು ಪ್ರದೇಶದಲ್ಲಿದ್ದು ಸಮಿಪದ ಹೈವೆ ಎತ್ತರವಾಗಿದೆ. ಚರಂಡಿ ಚಿಕ್ಕದಾಗಿದ್ದು ಹೆಚ್ಚು ಮಳೆ ಯಿಂದಾಗಿ ನೀರು ಶಾಲೆಗೆ ನುಗ್ಗುತ್ತಿದೆ. ನಿನ್ನೆಯ ವಿಪರೀತ ಮಳೆಯಿಂದ ಶಾಲೆಗೆ ನೀರು ಸೇರಿದ್ದು ಪರಿಶೀಲನೆಗೆ ಭಾನುವಾರ ಬೆಳಗ್ಗೆ ಆಗಮಿಸಿದ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಲೋಹಿತ್ ಕುಮಾರ ಮತ್ತು ಸದಸ್ಯರು, ಗ್ರಾಮಸ್ಥರು ಮತ್ತು ಶಿಕ್ಷಕರೊಂದಿಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ಚರ್ಚಿಸಿ ಮಕ್ಕಳ ಸುರಕ್ಷತೆಗಾಗಿ ಶಾಲೆ ಪಕ್ಕದ ಸರ್ಕಾರಿ ಆಯುಷ್ಮಾನ್ ಆಸ್ಪತ್ರೆ ಸಭಾಂಗಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿ ಸೋಮವಾರ ತರಗತಿ ಅರಂಭಿಸಿ ತರಗತಿ ನಿರ್ವಹಣೆ, ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲು ಏರ್ಪಾಡು ಮಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ತಿಳಿಸಿದ್ದಾರೆ.ನಂತರ ಮಳೆ ನೀರು ಖಾಲಿಯಾದ ಬಳಿಕ ಶಾಲೆಯನ್ನು ಸ್ವಚ್ಛಗೊಳಿಸಿ ತರಗತಿ ಆರಂಭಿಸಲು ತಿಳಿಸಿದೆ. ಈ ಶಾಲೆಯನ್ನು ಸ್ಥಳಾಂತರಿಸಲು ಅಥವಾ 5 ಅಡಿ ತಳಪಾಯ ಎತ್ತರಿಸಿ ಪುನನಿರ್ಮಾಣ ಮಾಡಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗುವುದು. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ ಒಟ್ಟು 34 ಮಕ್ಕಳು 4 ಜನ ಶಿಕ್ಷಕರಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆ ರಕ್ಷಣೆ ಪ್ರಮುಖವಾಗಿರುತ್ತದೆ ಎಂದು ತಿಳಿಸಿದ್ದಾರೆ.

--ಭಾರಿ ಮಳೆ: ಕೋಡಿ ಬಿದ್ದ ಚಿಕ್ಕಕೆರೆ

ತರೀಕೆರೆ: ತರೀಕೆರೆ ಮತ್ತು ಸುತ್ತಮುತ್ತ ಕಳೆದ ಮೂರು ನಾಲ್ಕು ದಿವಸಗಳಿಂದ ಸುರಿಯುತ್ತಿರುವ ಮಳೆ ಮುಂದುವರಿದಿದ್ದು, ಶನಿವಾರ ಮತ್ತು ಭಾನುವಾರ ಪಟ್ಟಣ ಹಾಗು ಸುತ್ತಮುತ್ತ ಗುಡುಗು, ಸಿಡಿಲು, ಗಾಳಿ ಸಹಿತ ಬಾರಿ ಮಳೆ ಸುರಿದಿದೆ.ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಚಿಕ್ಕೆಕೆರೆ ಕೋಡಿ ಬಿದ್ದು, ಕೋಡಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯ ಲಾರಂಭಿಸಿದೆ, ಪಟ್ಟಣದ ಅನೇಕ ರಸ್ತೆಗಳು, ತಗ್ದು ಪ್ರದೇಶಗಳು ಜಲಾವೃತಗೊಂಡಿದೆ, ಪಟ್ಟಣದ ರಸ್ತೆ ಮತ್ತು ಚರಂಡಿಗಳಲ್ಲಿ ಯಥೇಚ್ಚ ವಾಗಿ ನೀರು ತುಂಬಿ ಹರಿದಿದೆ. ಭಾರೀ ಮಳೆಯಿಂದ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.ಭಾರೀ ಮಳೆಯಿಂದಾಗಿ ಪಟ್ಟಣದ ದೊಡ್ಡಯ್ಯನ ಬೀದಿಯಲ್ಲಿ ಸರೋಜಮ್ಮ ಎಂಬುವರ ಮನೆ ಮತ್ತು ಸಮೀಪದ ಇಟ್ಟಿಗೆ ಗ್ರಾಮದಲ್ಲಿ ಪಾರ್ವತಿ ಬಾಯಿ ಎನ್ನುವರ ಮನೆ ಭಾಗಶಹ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.ಶೃಂಗೇರಿ ತಾಲೂಕಿನಲ್ಲಿ ಗುಡುಗು ಮಳೆ ಆರ್ಭಟ

ಶೃಂಗೇರಿ: ತಾಲೂಕಿನಾದ್ಯಂತ ಭಾನುವಾರ ಮತ್ತೆ ಗುಡುಗು ಸಿಡಿಲು ಸಹಿತ ಭಾರೀ ಮಳೆ ಆರ್ಭಟಿಸಿತು. ಶೃಂಗೇರಿ ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಗುಡುಗು ಸಿಡಿಲಿನ ಆರ್ಭಟ ಆರಂಭಗೊಂಡು ಸಂಜೆಯವರೆಗೂ ಎಡಬಿಡದೆ ಭಾರೀ ಮಳೆ ಅಬ್ಬರಿಸಿತು. ಮಳೆಯ ರಭಸಕ್ಕೆ ಚರಂಡಿ, ರಸ್ತೆಯ ಮೇಲೆ ನೀರು ಉಕ್ಕಿ ಹರಿಯಲಾರಂಬಿಸಿತು. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಮಳೆ ಸುರಿಯತ್ತಿತ್ತು. ಶನಿವಾರವೂ ಮಧ್ಯಾಹ್ನದಿಂದ ಮಳೆ ಆರಂಭಗೊಂಡು ರಾತ್ರಿಯವರೆಗೂ ಮುಂದುವರಿದಿತ್ತು. ಶೃಂಗೇರಿ ಪಟ್ಟಣ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿಯಿಡೀ ಮಳೆ ಸುರಿದು ಬೆಳಿಗ್ಗೆ ಕೊಂಚ ಬಿಡುವು ಕಂಡುಬಂದಿದ್ದರೂ ಮಧ್ಯಾಹ್ನದಿಂದ ಮಳೆಯ ಅಬ್ಬರ ಮತ್ತೆ ಆರಂಭವಾಗಿದೆ.

--

ಬಿಟ್ಟೂ, ಬಿಟ್ಟೂ ಮಳೆ: ಅಡಕೆಗೆ ಕೊಳೆ ರೋಗದ ಭೀತಿ

ನರಸಿಂಹರಾಜಪುರ: ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಶುರುವಾದ ಮಳೆ ಭಾನುವಾರ ಸಂಜೆಯವರೆಗೂ ಬಿಟ್ಟೂ, ಬಿಟ್ಟೂ ಸುರಿದಿದೆ.ಆಗಾಗ್ಗೆ ಗುಡುಗು ಸಹಿತ ಮಳೆಯಾಗಿದೆ. ಆದರೆ, ಗಾಳಿ ಇರಲಿಲ್ಲ. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ ಜೋರಾಗಿದ್ದ ಮಳೆ ನಂತರ ಕಡಿಮೆ ಯಾಗಿ ಆಗಾಗ್ಗೆ ಬಿಸಿಲು ಕಾಣಿಸಿಕೊಂಡಿದೆ. ಮಧ್ಯಾಹ್ನ 4 ಗಂಟೆ ನಂತರ ಮತ್ತೆ ಗುಡುಗು ಸಹಿತ ಮಳೆ ಬಂದಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ.

ಈ ವರ್ಷ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಈಗ ಬತ್ತದ ತೆನೆ ಬರುವ ಹೊತ್ತಿನಲ್ಲೇ ಮಳೆ ಸುರಿದರೆ ಬತ್ತದ ತೆನೆಯಲ್ಲಿ ಜೊಳ್ಳು ಹೆಚ್ಚಾಗಲಿದೆ ಎಂಬುದು ರೈತರ ಅಭಿಪ್ರಾಯ.ಅಡಕೆ ಬೆಳೆಗಾರರಿಗೆ ಅಡಕೆ ಕೊಳೆಯ ಭೀತಿ ಎದುರಾಗಿದೆ. ಈಗಾಗಲೇ ಜೂನ್‌, ಜುಲೈ, ಆಗಸ್ಟ್‌, ಸೆಪ್ಟಂಬರ್‌ ತಿಂಗಳಲ್ಲಿ ಕೊಳೆ ರೋಗ ಬಾರದಂತೆ ಬೋರ್ಡೋ ಸಿಂಪರಣೆ ಮಾಡಲಾಗಿತ್ತು. ಆದರೆ, ಈಗ ಬೋರ್ಡೋ ಸಿಂಪಡಣೆ ವಾಯಿದೆ ಮುಗಿದಿದ್ದರಿಂದ ಕೆಲವು ಅಡಕೆ ತೋಟ ಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ.

ಅಕ್ಟೋಬರ್‌ ತಿಂಗಳಲ್ಲೂ ಮಳೆ, ಮೋಡದ ವಾತಾವರಣ ಮುಂದುವರಿಯುತ್ತಿರುವುದರಿಂದ ಅಡಕೆ ಬೆಳೆಗಾರರಿಗೆ ಅಡಕೆ ಕೊಯ್ಲು ಹೇಗೆ ಮಾಡುವುದು ? ಎಂಬ ಚಿಂತೆ ಎದುರಾಗಿದೆ.

--

ಮಳೆಗೆ ಹಳ್ಳ ಕೊಳ್ಳಗಳು ನೀರಿನಿಂದ ಭರ್ತಿ

ಕಡೂರು: ಕಳೆದ ಮೂರು ದಿನಗಳಿಂದ ಕಡೂರು-ಬೀರೂರು ಪಟ್ಟಣಗಳು ಸೇರಿದಂತೆ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳಿಗೆ ನೀರಿನಿಂದ ತುಂಬಿ ಹರಿಯುತ್ತಿವೆ.

ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಕಾಗಿದ್ದ ರಾಗಿ ಚೇತರಿಸಿಕೊಂಡಿದೆ. ಕೆರೆಗಳಲ್ಲಿ ನೀರಿನ ಹರಿವು ಕೂಡ ಹೆಚ್ಚಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 50 ನಿಮಿಷಕ್ಕೂ ಹೆಚ್ಚು ಕಾಲ ಜೋರಾಗಿ ಮಳೆ ಸುರಿದರೆ ಸಂಜೆ 5 ಗಂಟೆ ನಂತರ ಮತ್ತೆ ಸುಮಾರು 40 ನಿಮಿಷ ಮತ್ತೆ ಜೋರಾಗಿ ಸುರಿಯಿುತು. ರಾತ್ರಿ ಕೂಡ ಮುಂದುವರಿದಿತ್ತು. ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿ ಮಳೆ ನೀರು ರಸ್ತೆ ಮೇಲೆ ಮತ್ತು ಬಸವೇಶ್ವರ ವೃತ್ತದಲ್ಲಿ ಜೋರಾಗಿ ನೀರು ಹರಿದಿದೆ.

--ಬಾಕ್ಸ್--ತೋಟಗಳಿಗೆ ನೀರು ನುಗ್ಗಿ ಅಪಾರ ನಷ್ಟ

ಬೀರೂರು: ತಾಲೂಕಿನ ಬೀರೂರು ಸುತ್ತಮುತ್ತ ಹಾಗು ದೊಡ್ಡ ಬೋಕಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಅಡಕೆ, ಬಾಳೆಗೆ ಭಾರೀ ಪ್ರಮಾಣದ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬೀರೂರು ಸಮೀಪದ ದೊಡ್ಡ ಬೋಕಿಕೆರೆ ಗ್ರಾಮದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ಅಡಕೆ, ತೆಂಗು, ಬಾಳೆ ತೋಟಗಳಿಗೆ ನೀರಿನ ರಭಸ ಹೆಚ್ಚಾಗಿ ಬಾಳೆ ಮರಗಳು, ಡೆಡಿಕೆ ಮರಗಳು ನೆಲಕ್ಕುರುಳಿವೆ. ಲಕ್ಷಾಂತರ ಎಕರೆ ರೈತರ ತೋಟಗಳಿಗೆ ಭಾರಿ ಮಳೆಯಾಗಿ ನೀರಿನ ಹರಿವು ಹೆಚ್ಚಾಗಿ ಸುಮಾರು ಒಂದುವರೆ ಅಡಿ ನೀರು ತೋಟಗಳಿಗೆ ನುಗ್ಗಿ ಅಲ್ಲಿಂದ ಕೆರೆಯಂತೆ ನೀರು ಹಾದು ಹೋಗುವ ಮೂಲಕ ತೋಟಗಳಿಗೆ ಹೋಗದಂತೆ ಪರಿಸ್ಥಿತಿ ಉಂಟಾಗಿದೆ.ರೈತರು ತೋಟದ ಒಳಗೆ ಹೋಗದಂತೆ ನೀರು ಹರಿಯುತ್ತಿದ್ದು, ಬಾಳೆ ಮರಗಳು ನೆಲಕ್ಕೆ ಕುಸಿದು, ಅಡಿಕೆ ತೋಟಗಳೂ ಕೂಡ ಸಂಪೂರ್ಣವಾಗಿ ಕೆರೆಯ ನೀರಿನಂತೆ ಆವೃತವಾಗಿವೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತೋಟಗಳು ಜಲಾವೃತವಾಗಿವೆ. ನೂರಾರು ಅಡಕೆ ಮರಗಳು, ಬಾಳೆ ಮರಗಳು ಕುಸಿದಿವೆ.

--20ಕೆಕೆಡಿಯು 3. ದೊಡ್ಡಬೋಕಿಕೆರೆಯಲ್ಲಿ ಅಡಿಕೆ ಬಾಳೆ ತೋಟಗಳಿಗೆ ನೀರು ನುಗ್ಗಿರುವುದು.-- 20 ಕೆಸಿಕೆಎಂ 2ಕಡೂರು ತಾಲೂಕಿನ ದೊಡ್ಡಬೋಕಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಅಡಕೆ ತೋಟದಲ್ಲಿ ನಿಂತಿರುವ ನೀರು.-- 20 ಕೆಸಿಕೆಎಂ 3ಅಜ್ಜಂಪುರ ತಾಲೂಕಿನ ಗೊಲ್ಲರಹಳ್ಳಿಯ ಹೂವಿನ ಹೊಲದಲ್ಲಿ ನಿಂತ ಮಳೆ‌ ನೀರು.