ಕರಾವಳಿಯಲ್ಲಿ ವರುಣನ ರುದ್ರನರ್ತನ, ಗುಡ್ಡ ಕುಸಿತ: 11 ಸಾವು ಶಂಕೆ

| Published : Jul 17 2024, 12:46 AM IST

ಸಾರಾಂಶ

ಅಂಕೋಲಾ ಬಳಿ ಕುಸಿದ ಗುಡ್ಡದ ಅಡಿಯಲ್ಲಿ ಸಿಲುಕಿ ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್‌ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 10 ಜನರು ಸಾವಿಗೀಡಾಗಿರುವ ಶಂಕೆ ಉಂಟಾಗಿದೆ.

ಕಾರವಾರ:

ಎರಡು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆ ಉತ್ತರ ಕನ್ನಡ ಕರಾವಳಿಯಲ್ಲಿ ಭಾರೀ ಅನಾಹುತ, ಅವಘಡಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಹಲವೆಡೆ ಗುಡ್ಡ ಕುಸಿತದಿಂದ 11 ಜನ ಮೃತರಾಗಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯ ಕರಾವಳಿಯ ಪ್ರಮುಖ ರಸ್ತೆಗಳೆಲ್ಲವೂ ಬಂದ್‌ ಆಗಿದ್ದು, ಅಕ್ಷರಶಃ ದ್ವೀಪದಂತಾಗಿದೆ. ಕರಾವಳಿಯ ಐದೂ ತಾಲೂಕುಗಳ ಬಹುತೇಕ ಭಾಗ ಜಲಾವೃತವಾಗಿದ್ದು ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಆಕ್ರಂದನ ಮುಗಿಲು ಮುಟ್ಟಿದ್ದು, ಜನಜೀವನ ಸಂಪೂರ್ಣವಾಗಿ ಹಳಿತಪ್ಪಿದೆ.

ಅಂಕೋಲಾ ಬಳಿ ಕುಸಿದ ಗುಡ್ಡದ ಅಡಿಯಲ್ಲಿ ಸಿಲುಕಿ ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್‌ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 10 ಜನರು ಸಾವಿಗೀಡಾಗಿರುವ ಶಂಕೆ ಉಂಟಾಗಿದೆ.

ಕಾರವಾರದ ಕಿನ್ನರದಲ್ಲಿ ಮನೆ ಕುಸಿದು ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯ ಮೃತದೇಹ ಹೊರ ತೆಗೆಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಅಪಾಯಕಾರಿ ಅನಿಲ ಇರುವ ಟ್ಯಾಂಕರ್ ನದಿಯಲ್ಲಿ ಕೊಚ್ಚಿಹೋಗಿದೆ. ಹೆದ್ದಾರಿಗಳು ಬಂದ್ ಆಗಿ ಕರಾವಳಿ ದ್ವೀಪದಂತಾಗಿವೆ. ನೂರಾರು ಮನೆಗಳು ಜಲಾವೃತವಾಗಿವೆ. ಕರಾವಳಿ ಜನತೆಯ ಬದುಕು ಮೂರಾಬಟ್ಟೆಯಾಗಿದೆ.

ಶಿರೂರಿನ ಗುಡ್ಡ ಕುಸಿತ ಸ್ಥಳದಿಂದ ಇದುವರೆಗೆ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ(36), ರೋಷನ್ ನಾಯ್ಕ(11) ಸೇರಿದಂತೆ ಲಾರಿ ಚಾಲಕ (ಹೆಸರು ತಿಳಿದು ಬರಬೇಕಿದೆ)ನ ಶವ ಗಂಗಾವಳಿ ನದಿ ದಡದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಶಿರೂರು ಬಳಿ ಚತುಷ್ಪಥ ಹೆದ್ದಾರಿ ಮೇಲೆ ಬೆಳಗ್ಗೆ 9 ಗಂಟೆ ವೇಳೆಗೆ ಮನೆಯ ಮೇಲೆ ಭಾರೀ ಗಾತ್ರದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಐವರು ಮಣ್ಣಿನಡಿ ಸಿಲುಕಿದ್ದಾರೆ. ಇದೇ ಸ್ಥಳದಲ್ಲಿದ್ದ ಅನಿಲ ಇರುವ ಟ್ಯಾಂಕರ್ ಒಂದು ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದ್ದು ಚಾಲಕ ಹಾಗೂ ಕ್ಲೀನರ್ ಕಣ್ಮರೆಯಾಗಿದ್ದಾರೆ.

ಮಣ್ಣಿನಡಿಯಲ್ಲಿ ಪ್ರಯಾಣಿಕರು ಸಿಲುಕಿದ್ದಾರೆಯೇ ಎಂಬ ಆತಂಕವೂ ಉಂಟಾಗಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದೇ ಸ್ಥಳದಲ್ಲಿ ಕಾರೊಂದು ಚಲಿಸುತ್ತಿದ್ದು, ಅದರಲ್ಲಿದ್ದ ಮೂವರು ಸಹ ಮೃತರಾಗಿದ್ದಾರೆ ಎಂಬ ಸಂದೇಹ ಉಂಟಾಗಿದ್ದು, ಪ್ರತ್ಯಕ್ಷ ದರ್ಶಿಗಳ ಪ್ರಕಾರ ಅದೇ ಸಂದರ್ಭದಲ್ಲಿ ಬರುತ್ತಿದ್ದ ಕಾರಿನ ಮೇಲೆ ಮಣ್ಣಿನ ಗುಡ್ಡ ಕುಸಿದಿದೆ.

ಸುಮಾರು 125 ಅಡಿಗಳಷ್ಟು ಎತ್ತರದಿಂದ ಭಾರೀ ಶಬ್ಧದೊಂದಿಗೆ ಕುಸಿದ ಗುಡ್ಡ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ್ದಲ್ಲದೇ ಪಕ್ಕದಲ್ಲಿಯೇ ಇದ್ದ ಗಂಗಾವಳಿ ನದಿಯಲ್ಲೂ ಬಹುಭಾಗ ಬಿದ್ದಿದೆ. ಸುಮಾರು 200 ಮೀಟರ್‌ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು, ಗಂಗಾವಳಿ ನದಿಯಲ್ಲಿ ಭಾರೀ ಗಾತ್ರದ ಕಲ್ಲು ಮಣ್ಣು ಬಿದ್ದಿದ್ದರಿಂದ ತುಂಬಿ ಹರಿಯುತ್ತಿದ್ದ ನದಿ ನೀರು ನದಿ ಆ ಬದಿಯಲ್ಲಿನ ಉಳುವರೆ ಗ್ರಾಮದ ಐದು ಮನೆಗಳಿಗೆ ನುಗ್ಗಿದೆ. ಮನೆಯಲ್ಲಿದ್ದ ಮಹಿಳೆಯೋರ್ವಳು ನಾಪತ್ತೆಯಾಗಿದ್ದು, 16 ಜನರು ನೀರಿನ ರಭಸಕ್ಕೆ ಗಾಯಗೊಂಡಿದ್ದು ಅವರನ್ನು ರಕ್ಷಿಸಿ ಗೋಕರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ.

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಸ್ಥಳೀಯ ಜಿಲ್ಲಾಡಳಿತ, ಗ್ರಾಮಸ್ಥರು ಸೇರಿದಂತೆ ಜೆಸಿಬಿ, ಹಿಟಾಚಿ ಟ್ರ್ಯಾಕ್ಟರ್‌ ಸೇರಿದಂತೆ ಮತ್ತಿತರ ಸಾಧನ ಬಳಸಿ ಮಣ್ಣು ತೆರವು ಮಾಡುವ ಹಾಗೂ ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮಳೆ, ಪ್ರತಿಕೂಲ ಹವಾಮಾನ ಮತ್ತಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಇದುವರೆಗೆ ನಾಲ್ಕು ಮೃತದೇಹ ಹೊರ ತೆಗೆಯಲಾಗಿದ್ದು, ರಾತ್ರಿಯೂ ಕಾರ್ಯಾಚರಣೆ ಮುಂದುವರಿದಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಪಂ ಸಿಇಒ ಸಹ ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಲು ಸಾಧ್ಯವಾಗಲಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರವಾರದಲ್ಲೇ ಇದ್ದರೂ ಘಟನಾ ಸ್ಥಳಕ್ಕೆ ಬರಲು ಕಾರವಾರ ಬಳಿ ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ಸಾಧ್ಯವಾಗಲಿಲ್ಲ. ಕೊನೆಗೆ ಡಿಸಿ, ಎಸ್ಪಿ ಲಾರಿಯೊಂದರ ಮೂಲಕ ಘಟನಾ ಸ್ಥಳಕ್ಕೆ ಬಂದಿದ್ದು ಕಾರ್ಯಾಚರಣೆ ಚುರುಕುಗೊಂಡಿದೆ.

ಕಾರವಾರ ತಾಲೂಕಿನ ಕಿನ್ನರದಲ್ಲಿ ಮನೆಯೊಂದು ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದ ತಿಕರ್ಸ್ ಗುರವ್ ಎಂಬಾತನ ಶವವನ್ನು ಹೊರತೆಗೆಯಲಾಗಿದೆ.

ಭೀಕರ ಮಳೆಗೆ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ವ್ಯಾಪಕ ಹಾನಿ ಉಂಟಾಗಿದೆ.

ಹೆದ್ದಾರಿ ಸಂಚಾರ ಸ್ಥಗಿತ:

ಅಂಕೋಲಾ ಬಳಿ ಶಿರೂರಿನಲ್ಲಿ ಕಾರವಾರ- ಮಂಗಳೂರು ಚತುಷ್ಪಥ ಹೆದ್ದಾರಿ ಮೇಲೆ ಗುಡ್ಡ ಕುಸಿದ ಪರಿಣಾಮವಾಗಿ ಅಂಕೋಲಾ- ಕುಮಟಾ ನಡುವೆ ಸಂಚಾರ ಸ್ಧಗಿತವಾಗಿದೆ. ಕಾರವಾರ- ಅಂಕೋಲಾ ನಡುವೆ ಅರಗಾ, ಚೆಂಡಿಯಾ ಹಾಗೂ ಅಮದಳ್ಳಿ ಬಳಿ ಚತುಷ್ಪಥ ಹೆದ್ದಾರಿಯ ಮೇಲೆ ನೀರು ನುಗ್ಗಿ ವಾಹನಗಳು ಸಂಚರಿಸದಂತಾಗಿದೆ.

ಕುಮಟಾ- ಹುಬ್ಬಳ್ಳಿ ಹೆದ್ದಾರಿಯಲ್ಲಿ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತವಾಗಿ ಸಂಚಾರ ಬಂದ್ ಆಗಿದೆ. ಹೊನ್ನಾವರ- ಬೆಂಗಳೂರು ಹೆದ್ದಾರಿಯಲ್ಲಿ ವರ್ನಕೆರೆ ಬಳಿ ಗುಡ್ಡ ಕುಸಿತದಿಂದ ಸಂಚಾರ ನಿಂತಿದೆ. ಕಾರವಾರ- ಇಳಕಲ್ ಹೆದ್ದಾರಿಯಲ್ಲಿ ಕಡವಾಡ ಮಂದ್ರಾಳಿ ಬಳಿ ಗುಡ್ಡ ಕುಸಿದು ಸಂಚಾರಕ್ಕೆ ವ್ಯತ್ಯಯವಾಗಿದೆ. ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ನೀರಿನಲ್ಲಿ ಮುಳುಗಿವೆ. ಪ್ರಯಾಣಿಕರು ಮುಂದಕ್ಕೆ ಹೋಗಲಾರದೆ ಪರದಾಡುತ್ತಿದ್ದಾರೆ.

ಅಘನಾಶಿನಿ, ಗಂಗಾವಳಿ, ಗುಂಡಬಾಳ, ಚಂಡಿಕಾ, ಭಾಸ್ಕೇರಿ, ಬಡಗಣಿ ಮತ್ತಿತರ ನದಿಗಳು ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿವೆ. ನದಿಗಳ ಇಕ್ಕೆಲಗಳಲ್ಲಿ ಮನೆಗಳು ಜಲಾವೃತವಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ನದಿಯಲ್ಲಿ ತೇಲಿ ಹೋದ ಟ್ಯಾಂಕರ್

ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದ ರಭಸಕ್ಕೆ ಅಪಾಯಕಾರಿ ಅನಿಲ ಇರುವ ಟ್ಯಾಂಕರ್ ಗಂಗಾವಳಿ ನದಿಗೆ ಕೊಚ್ಚಿಹೋಗಿದ್ದು, ಅನಿಲ ಸೋರಿಕೆಯಿಂದ ಅಪಾಯದ ಸಾಧ್ಯತೆಯನ್ನು ಮನಗಂಡು ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ ಹಿನ್ನೆಲೆಯಲ್ಲಿ ಕಾಳಜಿ ಸ್ಥಳಾಂತರಕಾರ್ಯ ನಡೆದಿದೆ.

ಗುಡ್ಡ ಕುಸಿತದ ಸ್ಥಳದಲ್ಲಿ ಮಣ್ಣು ಕಲ್ಲು ತೆರವು ಕಾರ್ಯಾಚರಣೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಕಲ್ಲು ಬಿದ್ದಿರುವುದರಿಂದ ತೆರವು ಕಾರ್ಯಾಚರಣೆ ಬುಧವಾರವಿಡಿ ನಡೆಯುವ ಸಾಧ್ಯತೆ ಇದೆ.