ಸಾರಾಂಶ
ಬೆಂಗಳೂರು : ಕಳೆದ ಕೆಲ ದಿನಗಳಿಂದ ನಗರದಲ್ಲಿ ಕಣ್ಮರೆಯಾಗಿದ್ದ ಮಳೆ ಸೋಮವಾರ ಭಾರೀ ಪ್ರಮಾಣದಲ್ಲಿ ಸುರಿದಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತಾದರೂ, ಮಳೆಯಾಗಿರಲಿಲ್ಲ. ಮಧ್ಯಾಹ್ನದ ನಂತರ ಭಾರಿ ಮಳೆ ಸುರಿದು ಜನರು ಪರದಾಡಿದರು.
ನಗರದಲ್ಲಿ ಭಾನುವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಇನ್ನಷ್ಟು ಅಬ್ಬರಿಸಿದೆ. ಮಧ್ಯಾಹ್ನ 4 ಗಂಟೆಯಿಂದ 7 ಗಂಟೆಯವರೆಗೆ ಸತತ ಮಳೆಯಾದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಕೆಲಸದಿಂದ ಮನೆಗೆ ತೆರಳುವವರು ಮಳೆಯಲ್ಲಿ ಸಿಲುಕಿದರು. ಮಳೆ ನಿಂತ ನಂತರ ಏಕಾಏಕಿ ವಾಹನಗಳು ರಸ್ತೆಗಿಳಿದಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಅಲ್ಲದೆ, ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದ ಕಾರಣ ರಸ್ತೆ ಮೇಲೆ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತುಸು ವ್ಯತ್ಯಯವಾಯಿತು.
ಮೈಸೂರು ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಕಾವೇರಿ ಜಂಕ್ಷನ್, ಓಕಳಿಪುರ ಜಂಕ್ಷನ್, ಶಿವಾನಂದ ವೃತ್ತ ರೈಲ್ವೆ ಕೆಳಸೇತುವೆ ಸೇರಿದಂತೆ ಪ್ರಮುಖ ಮೇಲ್ಸೇತುವೆ ಮತ್ತು ಕೆಳಸೇತುವೆಗಳಲ್ಲಿ ನೀರು ನಿಂತು ಜನರು, ವಾಹನ ಸವಾರರು ಪರದಾಡಿದರು. ರಾತ್ರಿ 7ರ ನಂತರ ಮಳೆ ನಿಂತಿದ್ದ ಕಾರಣದಿಂದಾಗಿ, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಯಾವುದೇ ವರದಿಯಾಗಿಲ್ಲ.
ಧಾರಾಕಾರ ಮಳೆಯಿಂದ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಆನಂದರಾವ್ ವೃತ್ತ, ಬ್ಯಾಟರಾಯನಪುರ ಹಾಗೂ ಶಿವಾನಂದ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ನದಿಯಂತಾಗಿದ್ದವು. ಇದರಿಂದ ಕೆಲ ಸಮಯದವರೆಗೆ ನಿಧಾನಗತಿಯ ವಾಹನ ಸಂಚಾರ ಉಂಟಾಯಿತು.
ಮಳೆಯೊಂದಿಗೆ ಭಾರಿ ಗಾಳಿ ಬೀಸಿದ ಪರಿಣಾಮ ನಗರದಲ್ಲಿ ನಾಲ್ಕು ಬೃಹತ್ ಗಾತ್ರದ ಮರಗಳು ಬಿದ್ದಿವೆ. ರಾಜಾಜಿನಗರದಲ್ಲಿ ಎರಡು, ಬನಶಂಕರಿ ಹಾಗೂ ಜೆಸಿ ನಗರದಲ್ಲಿ ತಲಾ ಒಂದು ಮರ ಧರೆಗೆ ಉರುಳಿವೆ. ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಗಮ ಸಂಚಾರಕ್ಕೆ ತಡೆಯುಂಟಾಗಿತ್ತು. ಮರ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.