ಸಾರಾಂಶ
ಯಲ್ಲಾಪುರ: ಬ್ರಾಹ್ಮಣನು ಋಷಿಮುನಿಗಳ ಗೋತ್ರ ಪರಂಪರೆಯಿಂದ ಬಂದವರು. ನಮ್ಮ ಗುರಿ ಅಧ್ಯಾತ್ಮದತ್ತ, ಮೋಕ್ಷದೆಡೆಗೆ ಇರಬೇಕಾದುದು ಮಹತ್ವದ್ದು. ಕೇವಲ ಪೌರೋಹಿತ್ಯಕ್ಕಾಗಿ, ಹಣ ಮಾಡುವುದಕ್ಕಾಗಿ ಸೀಮಿತಗೊಳ್ಳದೇ ನಮ್ಮ ಮೌಲ್ಯದ ಜತೆಗೆ ಮುನ್ನಡೆಯಬೇಕು ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.
ಅವರು ೧೫ರಂದು ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶಾರದಾಂಬಾ ಸಂಸ್ಕೃತ ವೇದ ಪಾಠಶಾಲೆ ಹಮ್ಮಿಕೊಂಡ ೨೧ ದಿನದ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸ್ವರ್ಣವಲ್ಲಿಯ ಶ್ರೀಗಳ ಮಾರ್ಗದರ್ಶನದಲ್ಲಿ ಇಂತಹ ಶಿಬಿರಗಳು ಆಯೋಜಿಸಲ್ಪಡುತ್ತಿವೆ. ಅನೇಕ ಪಾಲಕರಿಗೆ ಗಾಯತ್ರಿ ಮಂತ್ರವೂ ಬಾರದಿರುವುದನ್ನು ಗಮನಿಸಿದ ಶ್ರೀಗಳು, ಶಿಬಿರ ಮಾಡುವುದಕ್ಕೆ ಕಾರಣವಾಗಿದೆ. ಚಿಕ್ಕಂದಿನಿಂದಲೇ ಪ್ರತಿನಿತ್ಯ ಕನಿಷ್ಠ ೧೦೮ ಗಾಯತ್ರಿ ಜಪವನ್ನಾದರೂ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ವೇದದ ಮೂಲಕ ಜ್ಞಾನ ಸಂಪಾದನೆ, ಆರೋಗ್ಯಕ್ಕಾಗಿ ಯೋಗ ಮತ್ತು ಸಜ್ಜನರ ಸಹವಾಸ ಇವು ಮೂರನ್ನು ನೀವು ಅಳವಡಿಸಿಕೊಂಡರೆ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೀರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣನೇನೂ ಅರ್ಜಿ ಹಾಕಿ ಹುಟ್ಟಿಲ್ಲ. ನಮ್ಮ ಜಾತಿಯ ಬಗ್ಗೆ ನಮಗೆ ಅಭಿಮಾನವಿರಬೇಕು. ಇಂದು ಕೆಲವರು ಬ್ರಾಹ್ಮಣರನ್ನು ಟೀಕಿಸುವವರನ್ನು ಕಾಣುತ್ತೇವೆ. ಅಂತಹವರು ಅವರ ಕಷ್ಟಕಾಲದಲ್ಲಿ ಬ್ರಾಹ್ಮಣರ ಕಾಲಿಗೇ ಬೀಳುವುದನ್ನು ಕಂಡಿದ್ದೇವೆ. ಉ.ಕ, ದ.ಕ, ಶಿವಮೊಗ್ಗದ ಅನೇಕ ಪುರೋಹಿತರು ಬೆಂಗಳೂರಿನಂತ ಮಹಾನಗರಗಳಲ್ಲಿ ಉತ್ತಮ ಪುರೋಹಿತರಾಗಿ ಜೀವನ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂದು ೧೦ ಎಕರೆ ಅಡಿಕೆ ತೋಟ ಇದ್ದವನಿಗಿಂತಲೂ ಶ್ರೇಷ್ಠ ಪುರೋಹಿತರನ್ನು ಹುಡುಕಿ ಹೆಣ್ಣುಮಕ್ಕಳನ್ನು ಕೊಡುವ ವಾತಾವರಣ ಬೆಳೆದುಬಂದಿದೆ ಎಂದರು.ಋಷಿಕುಲ ಸಂಸ್ಥೆಯ ಮುಖ್ಯಸ್ಥ ಡಾ.ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ, ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಜಗದೀಶ ದೀಕ್ಷಿತ್ ಇದ್ದರು.
ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ವಂದಿಸಿದರು. ಅಧ್ಯಾಪಕ ಡಾ.ಶಿವರಾಮ ಭಾಗ್ವತ ನಿರ್ವಹಿಸಿದರು.ಶಾರದಾಂಬಾ ಸಂಸ್ಕೃತ ಪಾಠಶಾಲೆಯಲ್ಲಿ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟನೆಗೊಂಡಿತು.