ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

| Published : Aug 05 2025, 11:45 PM IST

ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಳಿಗೆ ಕಪ್ಪು ಪಟ್ಟಿ ಹಾಕಿಕೊಂಡು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಳಿಗೆ ಕಪ್ಪು ಪಟ್ಟಿ ಹಾಕಿಕೊಂಡು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಹಳೇ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು. ಸಾರಿಗೆ ನೌಕರರ ಹಿಂಬಾಕಿ ವೇತನ ಕೂಡಲೇ ಬಿಡುಗಡೆ ಮಾಡಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ , ನಮಗೆ ಸಾರಿಗೆ ನೌಕರರ ಬಗ್ಗೆ ಬಹಳ ಗೌರವ ಇದೆ. ಇದು ಅವರ ಬಹಳ ವರ್ಷಗಳ ಬೇಡಿಕೆಯಾಗಿದೆ. 36 ತಿಂಗಳ ಸಂಬಳ ಇಟ್ಟುಕೊಂಡರೆ ಅವರ ಜೀವನ ನಡೆಯುವುದು ಹೇಗೆ. ಅವರ ಹಳೆಯ ಸಂಬಳವನ್ನು ರಾಜ್ಯ ಸರ್ಕಾರ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡಲೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ನೌಕರರ ಜೊತೆ ಸೇರಿ ಹೋರಾಟ ನಡೆಸುವುದರ ಜೊತೆಗೆ ಕರ್ನಾಟಕ ಬಂದ್ ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಹಾಗೂ ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಬಿಜೆಪಿಯವರೇ ನಿಜವಾದ ಶತ್ರುಗಳಾಗಿ ಅಡ್ಡಿಯಾಗಿದ್ದಾರೆ. ಈ ಯೋಜನೆಗಳನ್ನು ಪ್ರತಿಯೊಬ್ಬ ರಾಜಕಾರಣಿ ಹಾಗೂ ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ರಾಜಕೀಯ ವಸ್ತುಗಳಾಗಿ ಬಳಸಿಕೊಳ್ಳುತ್ತಿವೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ಮೇಕೆದಾಟಿಗೆ ಕಾಂಗ್ರೆಸ್ಸೆ ಶತ್ರು :

ಮೇಕೆದಾಟು ಯೋಜನೆ ಜಾರಿಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಂಚತಾರಾ ಪಾದಯಾತ್ರೆ ನಡೆಸಿದರು. ಅದರಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈಗ ಕೇಂದ್ರ ಸರ್ಕಾರ ಮೇಕೆದಾಟಿಗೆ ಅನುಮತಿ ಕೊಡಿಸಲಿ ನಾವು ಮಾಡುತ್ತೇವೆ ಎಂದು ಹೇಳಿ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ದೂರಿದರು.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದು ವಿದ್ಯುತ್ ಉತ್ಪಾದನೆ ಮಾಡಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಕೊಡುತ್ತೇವೆ. ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುತ್ತೇವೆ. ಇದನ್ನು ತಡೆಯುವುದು ಮೂರ್ಖತನದ ಪರಮಾವಧಿ.

ಕರುಣಾನಿಧಿ, ಜಯಲಲಿತಾ ಬಳಿಕ ಈಗ ಸ್ಟಾಲಿನ್ ಯೋಜನೆಗೆ ವಿರೋಧ ಮುಂದುವರಿಸಿದ್ದಾರೆ. ಸ್ಟಾಲಿನ್ ಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಆದ್ದರಿಂದ ರಾಹುಲ್ ಗಾಂಧಿ ಅವರೊಂದಿಗೆ ಸ್ಟಾಲಿನ್ ಅವರನ್ನು ಒಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಮಾಣಿಕವಾಗಿ ಮಾಡಿದರೆ ಯೋಜನೆ ಸುಲಭವಾಗಿ ಜಾರಿಯಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರಿಂದಲೇ ಅಡ್ಡಿ:

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ ತಾಲೂಕು ಅಧ್ಯಕ್ಷ ವಿ.ಎನ್.ಗಂಗಾಧರ್, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯ ಸುಧಾ, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕ ಅಧ್ಯಕ್ಷ ಪ್ರಸನ್ನ, ಸಹ ಕಾರ್ಯದರ್ಶಿ ಪಿ.ಸುರೇಶ್, ವಾಟಾಳ್ ಪಕ್ಷದ ಮುಖಂಡ ನಾರಾಯಣಸ್ವಾಮಿ, ಮಹದೇವ್, ಪಾರ್ತಸಾರಥಿ ಮತ್ತಿತರರು ಭಾಗವಹಿಸಿದ್ದರು.

5ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪ ಸಂಘಟನೆಗಳ ಕಾರ್ಯಕರ್ತರು ಕೊರಳಿಗೆ ಕಪ್ಪು ಬಟ್ಟೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು.