ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್
ನಗರದ ಸಾರಿಗೆ ಬಸ್ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿ ಮೇಕೆಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಿ ಮೇಕೆದಾಟು ಯೋಜನೆ ಮಾಡಬೇಕು ಹಾಗೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿದರು. ಇದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು.ವಾಟಾಳ್ ನಾಗರಾಜ್ ಮಾತನಾಡಿ, ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಹಾಗೂ ತಮಿಳುನಾಡಿಗೆ ಕಾವೇರಿ ಹರಿಸುವಂತೆ ಹೊರಡಿಸಿರುವ ಆದೇಶ ವಿರೋಧಿಸಿ ಆಗಸ್ಟ್ 13ರಂದು ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ಶಾಂತಿಯುತವಾಗಿ ಅಖಂಡ ಕರ್ನಾಟಕ ಬಂದ್ ನಡೆಯಲಿದೆ. ಅಖಂಡ ಕರ್ನಾಟಕದ ಒಳತಿಗಾಗಿ ಬಂದ್ ಗೆ ಕರೆ ನೀಡಿದ್ದೇವೆಯೇ ಹೊರತು ಬೇರೆ ಯಾರ ವಿರುದ್ಧವೂ ಅಲ್ಲ ಎಂದರು.
ಈಗಾಗಲೇ 2 ಸಾವಿರ ಕನ್ನಡಪರ ಸಂಘಟನೆಗಳು, ಹೋಟೆಲ್ ಮಾಲೀಕರು, ಚಿತ್ರಮಂದಿರ ಮಾಲೀಕರು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ಲಾರಿ ಮಾಲೀಕರು, ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನಿಷೇಧ ಹೇರಬೇಕು. ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡಬೇಕು. ಪ್ರತಿವರ್ಷ ಗಡಿನಾಡಿನ ಕನ್ನಡ ಶಾಲೆಗಳಿಗೆ, ಕನ್ನಡ ಸಂಘಗಳಿಗೆ 500 ಕೋಟಿ ಅನುದಾನ ಮೀಸಲಿಡಬೇಕು. ಕೈಗಾರಿಕೆಗಳು, ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಪ್ರತಿಭಟನೆಯಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ , ಕನ್ನಡ ಒಕ್ಕೂಟದ ಗಿರೀಶ್, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್.ಗಂಗಾಧರ್ , ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್ , ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮಿ, ತಾಲೂಕು ಅಧ್ಯಕ್ಷೆ ಪುಷ್ಪಲತಾ, ವಿದ್ಯಾರ್ಥಿ ಘಟಕ ಅಧ್ಯಕ್ಷ ಹೇಮಂತ್ , ದಲಿತ ಘಟಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ಯುವ ಘಟಕ ಜಿಲ್ಲಾಧ್ಯಕ್ಷ ವಿ.ಎನ್.ಶ್ರೀನಿವಾಸ್, ತಾಲೂಕು ಗೌರಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಕುಮಾರ್, ಕಾರ್ಯಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಪಿ.ಸುರೇಶ್ , ನಗರ ಘಟಕ ಅಧ್ಯಕ್ಷ ಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.
1ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಸಾರಿಗೆ ಬಸ್ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿ ವಾಟಾಳ್ ನಾಗರಾಜ್ ಮೇಕೆಗಳೊಂದಿಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.