ಬಡ ಜನರ ಬದುಕಿನ ಭರವಸೆಯಾಗಿದ್ದ ಯೋಜನೆ ಬದಲಾಯಿಸಿ ವಿ.ಬಿ.ರಾಮ್ ಜಿ ಯೋಜನೆ ಜಾರಿ ತರಲಾಗಿದೆ. ಈಗಿನ ಯೋಜನೆಯಲ್ಲಿ ಬಡ ಕೂಲಿಕಾರರ ಅನೇಕ ವಿರೋಧಿ ಅಂಶಗಳಿವೆ. ಅವುಗಳನ್ನು ಕೂಡಲೇ ತೆಗೆಯಬೇಕು. ಪಡಿತರ ಚೀಟಿ ಇ-ಕೆವೈಸಿಯನ್ನು ಸರಳೀಕರಣಗೊಳಿಸುವ ಮೂಲಕ ದಿನವಿಡೀ ಜನರ ಕಾಯುವಿಕೆಯನ್ನು ತಪ್ಪಿಸಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿಬಿ ರಾಮ್ ಜಿ ಯೋಜನೆ ತಾಂತ್ರಿಕ ಸಮಸ್ಯೆ ಬಗೆಹರಿಸಿ ತಕ್ಷಣವೇ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಸೋಮವಾರ ಮೆರವಣಿಗೆ ಮೂಲಕ ನೂರಾರು ಪ್ರತಿಭಟನಾಕಾರರು ಸಾಗಿ ಪಡಿತರ ಚೀಟಿ ಇ-ಕೆವೈಸಿ, ಆಧಾರ್ ಆಪ್ ಡೇಟ್ ಕಾರ್ಯಗಳಲ್ಲಿನ ವಿಳಂಬ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ನಿರಾಕರಿಸಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಬಡ ಜನರ ಬದುಕಿನ ಭರವಸೆಯಾಗಿದ್ದ ಯೋಜನೆ ಬದಲಾಯಿಸಿ ವಿ.ಬಿ.ರಾಮ್ ಜಿ ಯೋಜನೆ ಜಾರಿ ತರಲಾಗಿದೆ. ಈಗಿನ ಯೋಜನೆಯಲ್ಲಿ ಬಡ ಕೂಲಿಕಾರರ ಅನೇಕ ವಿರೋಧಿ ಅಂಶಗಳಿವೆ. ಅವುಗಳನ್ನು ಕೂಡಲೇ ತೆಗೆಯಬೇಕು. ಪಡಿತರ ಚೀಟಿ ಇ-ಕೆವೈಸಿಯನ್ನು ಸರಳೀಕರಣಗೊಳಿಸುವ ಮೂಲಕ ದಿನವಿಡೀ ಜನರ ಕಾಯುವಿಕೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಗ್ರಾಪಂ ವ್ಯಾಪ್ತಿಯಲ್ಲಿ ಆಧಾರ್ ಕೇಂದ್ರ ತೆರೆಯಬೇಕು. ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳ ಸಮಸ್ಯೆಗಳನ್ನು ಮನೆ ಬಾಗಿಲಿಗೆ ಹೋಗಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯುನ ರಾಜ್ಯ ಮುಖಂಡ ಜಿ.ರಾಮಕೃಷ್ಣ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಸಮರ್ಪಕವಾಗಿ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಬೇಕು. ಜಾನುವಾರುಗಳಿಗೆ ಮೇವು ಒದಗಿಸಿ ಕೆರೆ ಕಟ್ಟೆಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲ ರೀತಿಯ ಸಾಲಮನ್ನಾ ಮಾಡಬೇಕು. ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ನೇಮಕವನ್ನು ತ್ವರಿತವಾಗಿ ಮಾಡಬೇಕು. ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಂತರ ಗ್ರೇಡ್-2 ತಹಸೀಲ್ದಾರ್ ಭಾಗ್ಯಲಕ್ಷ್ಮಿ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಜಯಶೀಲಾ, ಪ್ರೇಮಾ, ಸುಶೀಲಾ, ಡಿ.ಕೆ.ಲತಾ, ಟಿ.ಬಿ.ಶೋಭಾ ಪಾಲ್ಗೊಂಡಿದ್ದರು.ಎಸ್ಐಟಿ ತನಿಖಾ ತಂಡದ ಬದಲಾವಣೆಗೆ ಆಗ್ರಹಮಳವಳ್ಳಿ: ಧರ್ಮಸ್ಥಳದ ಸೌಜನ್ಯ ಪ್ರಕರಣ ಮರುತನಿಖೆಗೆ ನೇಮಕವಾಗಿರುವ ಎಸ್ಐಟಿ ತನಿಖಾ ತಂಡದ ಬದಲಾವಣೆಗೆ ಆಗ್ರಹಿಸಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ವೇಳೆ ದೇವಿ ಮಾತನಾಡಿ, ನಮ್ಮ ಸಂಘಟನೆಯು ಪದ್ಮಲತಾ ಪ್ರಕರಣದಿಂದಲೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ. ಸೌರ್ಜನ್ಯ ಪ್ರಕರಣದ ಸಂಬಂಧ ಸುಪ್ರೀ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಜ್ಯ ಸರ್ಕಾರ ನ್ಯಾಯದ ಪರವಾಗಿ ನಿಲ್ಲಬೇಕು. ಪ್ರಕರಣದ ನಿಜವಾದ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಪ್ರಸ್ತುತ ರಚನೆಗೊಂಡಿರುವ ಎಸ್ಐಟಿ ತನಿಖಾ ತಂಡದಲ್ಲಿ ಅನೇಕ ಆರೋಪ ಹೊತ್ತ ಕಳಂಕರಹಿತ ಅಧಿಕಾರಿಗಳಿದ್ದಾರೆ. ಇವರನ್ನು ಕೈಬಿಟ್ಟು ಇಲಾಖೆಯಲ್ಲಿ ಇರುವ ಅನೇಕ ಉನ್ನತ ಶ್ರೇಣಿಯ, ತಜ್ಞ, ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಬೇಕು. ಪ್ರಕರಣವು ಸಾಕಷ್ಟು ಗಂಭೀರವಾಗಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಒಳಗಾಗದೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.