ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಕ್ಕಿದ್ದರಿಂದ ಅವರ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದ ವೀಣಾ ಅಭಿಮಾನಿಗಳು ಟೈರ್‌ಗೆ ಬೆಂಕಿ ಹಚ್ಚಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ನಾಯಕರ ವಿರುದ್ಧ ಕಿಡಿಕಾರಿದರು.ಈ ವೇಳೆ ಕಾಂಗ್ರೆಸ್ ಟಿಕೆಟ್ ಲಿಸ್ಟ್‌ನಲ್ಲಿ ನಮ್ಮ ಹೆಸರು ಬರುವಂತೆ ಮಾಡಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ ಗೋ ಬ್ಯಾಕ್ ಎಂದು ಘೋಷಣೆಗಳನ್ನು ಕೂಗಿದರು. ಮತ್ತು ಜಿಲ್ಲೆಯ ನಾಯಕರಿಗೆ ಟಿಕೆಟ್ ಕೈ ತಪ್ಪುವಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ ಪಾತ್ರ ಮಹತ್ವದ್ದಿದೆ ಎಂದು ಅವರ ವಿರುದ್ಧವೂ ವೀಣಾ ಅಭಿಮಾನಿಗಳು ಕಿಡಿಕಾರಿದರು.
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆ ಎದುರಿಸುವ ಅನೇಕ ಸಮರ್ಥ ನಾಯಕರಿದ್ದಾರೆ. ಅಂತಹದರಲ್ಲಿ ಜಿಲ್ಲೆಯ ಮುಖ ನೋಡದ ಸಂಯುಕ್ತಾ ಪಾಟೀಲ ಅವರಿಗೆ ಏಕೆ ಟಿಕೆಟ್ ಫೈನಲ್ ಆಗುವ ಮಾತುಗಳು ಕೇಳಿ ಬರುತ್ತಿವೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ವೀಣಾ ಕಾಶಪ್ಪನವರ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದರೂ, ಮನೆಯಲ್ಲಿ ಕುಳಿತುಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿರುವ ಅವರಿಗೆ ಬಡವರ, ರೈತರ ಹಾಗೂ ಶ್ರಮಿಕರ ಮೇಲೆ ಕಾಳಜಿ ಇದೆ. ಇಂತಹ ಮಹಿಳೆಗೆ ಟಿಕೆಟ್ ತಪ್ಪಿಸಿದರೆ ಅದರ ಪರಿಣಾಮ ಪಕ್ಷ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುತ್ತಿಗೆ ಹಾಕುವುದನ್ನು ತಡೆದ ಪೊಲೀಸರೊಂದಿಗೆ ವೀಣಾ ಅಭಿಮಾನಿಗಳು ವಾಗ್ವಾದ ನಡೆಸಿದರು. ನಂತರ ಕಾಂಗ್ರೆಸ್ ಕಚೇರಿಗೆ ಹೋಗಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಇಲ್ಲದ ಕಾರಣ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಮನವಿ ಸ್ವೀಕರಿಸಲು ಆಗಮಿಸುತ್ತಿದಂತೆ ಅವರೊಂದಿಗೆ ವಾಗ್ವಾದ ಜೋರಾಗಿ ನಡೆಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಪ್ರತಿಭಟನೆಯಲ್ಲಿ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಇಳಕಲ್ಲ ಬ್ಲಾಕ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಮುತ್ತಣ್ಣ ಕಲಗೋಡಿ, ಮಂಜುನಾಥ ಪುರತಗೇರಿ, ಪುನೀತ ಅರಳಿ, ಶರಣಪ್ಪ ಗೋಡಿ, ಶರಣು ಬೆಲ್ಲದ, ಶಿವಾನಂದ ಕಂಟಿ, ಖಾಜಾಸಾಭ್ ಬಾಗವಾನ, ಶಂಕರಪ್ಪ ನೇಗಲಿ, ದೀಪಾ ಸುಂಕದ, ಮಂಜುಳಾ ಭೂಸಾರೆ, ಸುಧಾ ಪಾಟೀಲ, ಸಂಗೀತಾ ಮಡಿವಾಳರ, ಗುಣವಂತಿ ನಿಡೋಣಿ ಸೇರಿದಂತೆ ಅನೇಕರಿದ್ದರು.ಕೋಟ್‌ಜಿಲ್ಲೆಯ ಪರಿಚಯವೇ ಇಲ್ಲದ ಸಂಯುಕ್ತಾ ಪಾಟೀಲ ಯಾರೆಂಬುವುದೇ ನಮಗೆ ಗೊತ್ತಿಲ್ಲ. ಸಚಿವರ ಮಗಳು ಎಂಬ ಮಾತ್ರಕ್ಕೆ ಅವರಿಗೆ ಟಿಕೆಟ್ ನೀಡುವುದು ಎಷ್ಟು ಸರಿ. 5 ವರ್ಷ ಹಗಲಿರುಳು ಪಕ್ಷಕ್ಕಾಗಿ ದುಡಿದ ವೀಣಾ ಅಂತಹ ಗೆಲ್ಲುವ ನಾಯಕಿಗೆ ಟಿಕೆಟ್ ನೀಡುವುದನ್ನು ಬಿಟ್ಟು, ಪರ ಜಿಲ್ಲೆಯವರಿಗೆ ಟಿಕೆಟ್ ನೀಡುತ್ತಿರುವುದು ಸರಿಯಲ್ಲ. ಪಕ್ಷಕ್ಕಾಗಿ ದುಡಿದ ವೀಣಾ ಅವರಿಗೆ ಟಿಕೆಟ್ ನೀಡಲೇಬೇಕು.
ವೀಣಾ ಕಾಶಪ್ಪನವರ ಅಭಿಮಾನಿಗಳು.