ಹಾವೇರಿ : ದಾಖಲೆಗಾಗಿ ಚುನಾವಣೆಗೆ ಸ್ಪರ್ಧಿಸುವ ವೀರಭದ್ರಪ್ಪ ಕಬ್ಬಿನದ

| Published : Apr 20 2024, 01:12 AM IST / Updated: Apr 20 2024, 03:58 PM IST

vote from home 3.jpg
ಹಾವೇರಿ : ದಾಖಲೆಗಾಗಿ ಚುನಾವಣೆಗೆ ಸ್ಪರ್ಧಿಸುವ ವೀರಭದ್ರಪ್ಪ ಕಬ್ಬಿನದ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗ ನೀಡುವ ಚಿನ್ಹೆ ಪಡೆದು ಬಿತ್ತಿ ಪತ್ರ ಮಾಡಿಸಿ ತಾವು ಸ್ಪರ್ಧಿಸಿದ ಕ್ಷೇತ್ರದ ಗ್ರಾಮಗಳ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಸಹ ಕೈಗೊಳ್ಳುತ್ತಾರೆ

ಶರಣು ಸೊಲಗಿ 

ಮುಂಡರಗಿ :  ತಾಲೂಕಿನ ಕೊರ್ಲಹ‍ಳ್ಳಿ ಗ್ರಾಮದ 77 ವರ್ಷದ ಹಿರಿಯ ಜೀವ ವೀರಭದ್ರಪ್ಪ ವೀರಪ್ಪ ಕಬ್ಬಿನದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದವರಲ್ಲಿ ತಮ್ಮ ಹೆಸರು ಸಹ ದಾಖಲೆಯಾಗಬೇಕೇನ್ನುವ ಉದ್ದೇಶದಿಂದ 7 ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಮುಂಡರಗಿ ವಿಧಾನಸಭಾ ಮತಕ್ಷೇತ್ರವಿದ್ದಾಗ ಎರಡು ಬಾರಿ, 2008ರ ಕ್ಷೇತ್ರ ಮರುವಿಂಗಡನೆಯಲ್ಲಿ ಮುಂಡರಗಿ ಕ್ಷೇತ್ರ ರದ್ದಾದ ನಂತರ ಒಂದು ಬಾರಿ ರೋಣ ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಮ್ಮೆ ಗದಗ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿದ್ದಾರೆ. ಅದರಂತೆ ಹಾವೇರಿ ಲೋಕಸಭಾ ಮತಕ್ಷೇತ್ರಕ್ಕೆ 2014 ಮತ್ತು 2019ರಲ್ಲಿ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದು, ಇದೀಗ 2024ರ ಲೋಕಸಭಾ ಚುನಾವಣೆಗೂ ಸಹ ಏ. 18 ಹಾಗೂ 19 ರಂದು ಪ್ರತ್ಯೇಕ ಎರಡು ನಾಮಪತ್ರ ಸಲ್ಲಿಸಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ಪ್ರಕಾರ ಒಬ್ಬ ಭಿಕ್ಷೆ ಬೇಡುವವನಿಗೂ ಚುನಾವಣೆಗೆ ಸ್ಪರ್ಧಿಸಲು ಹಕ್ಕಿದೆ. ಜತೆಗೆ ನಮ್ಮ ಪ್ರಜಾಪ್ರಭುತ್ವ ಜಾರಿಯಾಗಿ 75 ವರ್ಷ ಗತಿಸಿದ್ದು, ಯಾವುದೇ ಆಸೆ, ಆಮಿಶಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟು ಮತದಾನ ಮಾಡುವವರ ಸಂಖ್ಯೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಅಲ್ಲದೇ ಪ್ರತಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ಚುನಾವಣಾ ಆಯೋಗದ ಚುನಾವಣೆಗೆ ಸ್ಪರ್ಧಿಸಿದವರ ಪಟ್ಟಿಯಲ್ಲಿ ಸದಾ ನಮ್ಮ ಹೆಸರು ದಾಖಲಾಗುವ ಮೂಲಕ ಅದೊಂದು ಇತಿಹಾಸವಾಗಬೇಕು ಎನ್ನುವುದು ನನ್ನ ಸ್ಪರ್ಧೆಯ ಉದ್ದೇಶವಾಗಿದೆ ಎನ್ನುತ್ತಾರೆ ವೀರಭದ್ರಪ್ಪ ಕಬ್ಬಿನದ.

ಇವರು ಕೇವಲ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸುಮ್ಮನಿರುವುದಿಲ್ಲ. ನಂತರದಲ್ಲಿ ಚುನಾವಣಾ ಆಯೋಗ ನೀಡುವ ಚಿನ್ಹೆ ಪಡೆದು ಬಿತ್ತಿ ಪತ್ರ ಮಾಡಿಸಿ ತಾವು ಸ್ಪರ್ಧಿಸಿದ ಕ್ಷೇತ್ರದ ಗ್ರಾಮಗಳ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಸಹ ಕೈಗೊಳ್ಳುತ್ತಾರೆ. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ 1500ಕ್ಕೂ ಹೆಚ್ಚು ಮತ ಪಡೆದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮತ ಪಡೆದುಕೊಂಡಿದ್ದರು.

ನಮಗ ಮಕ್ಳಿಲ್ಲ, ಮರಿ ಇಲ್ರೀ. ಮನ್ಯಾಗ ನಾನು ನನ್ನ ಹೆಂಡ್ತಿ ಇಬ್ರ ಇರ್ತೀವಿ. ನನಗ, ನನ್ ಹೆಂಡ್ತೀಗೆ ಇಬ್ರರಿಗೂ ತಿಂಗ್ಳಾ ₹1200 ಸರ್ಕಾರದ ಪಗಾರ ಬರ್ತೈತಿ. ಸ್ವಂತ ಹೊಲಾ ಐತಿ. ಅದ್ರಾಗೂ ಇನ್ಕಮ್ ಬರ್ತೈತಿ. ಆ ಎಲ್ಲ ರೊಕ್ಕಾ ಇಟಗೊಂಡಾರ ಏನ್ ಮಾಡೂದೈತಿ. ಚುನಾವಣೆಗೆ ಕೊಟ್ರ ನಾಳೆ ನಾ ಸತ್ ಮ್ಯಾಲೆ ಇವಾ ಹಗಲೆಲ್ಲ ಎಂಎಲ್ಎ. ಎಂಪಿ ಇಲೆಕ್ಷನ್ನಿಗೆ ನಿಲ್ತಿದ್ದ ನೋಡು ಅಂತಾ ಜನಾ ಮಾತಾಡೂವಂಗ ಆಗ್ಬೇಕು. ಜತೆಗೆ ಚುನಾವಣೆ ಆಯೋಗ್ದಾಗ ನನ್ ಹೆಸ್ರು ಸದಾ ಇರುವಂಗ ಆಗಬೇಕ ನೋಡ್ರಿ ಎಂದು ವೀರಭದ್ರಪ್ಪ ಕಬ್ಬಿನದ, ಕೊರ್ಲಹಳ್ಳಿ ಹೇಳಿದ್ದಾರೆ.